ಬೆಳ್ತಂಗಡಿ; ತಾಲೂಕಿನ ಬಾಂಜಾರು ಮಲೆಯಲ್ಲಿ ವಾಸಿಸುತ್ತಿರುವ 47 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಭೂ ಮಸೂದೆ ಕಾಯ್ದೆಯ ಅಡಿಯಲ್ಲಿ ಮಂಜೂರಾಗಿರುವ ಜಮೀನಿನ ವಿರುದ್ದ ರಾಜ್ಯ ಸರಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆಯುವಂತೆ ಹಿರಿಯ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವಿಧಾನ ಪರಿಷತ್ ನಲ್ಲಿ ಒತ್ತಾಯಿಸಿದ್ದಾರೆ.
ಬೆಳ್ತಂಗಡಿ ತಾಲ್ಲೂಕಿನ ಬಾಂಜಾರು ಮಲೆಕುಡಿಯ ಕಾಲೋನಿಯಲ್ಲಿ 47 ಕುಟುಂಬಗಳು ವಾಸಿಸುತ್ತಿದ್ದಾರೆ. ಯೆನೆಪೋಯ ಮೊಹಿದ್ದೀನ್ ಕುಂಞಿ ಅಂಡ್ ಕಂಪನಿ ಇವರಿಗೆ ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದಲ್ಲಿ ಒಟ್ಟು 4,028 ಎಕರೆ ಜಮೀನನ್ನು ಹೊಂದಿದ್ದು ಇದರಲ್ಲಿ 368 ಎಕರೆ ಜಮೀನು ಹೆಚ್ಚುವರಿ ಜಮೀನು ಹೊಂದಿರುವುದಾಗಿ ಬೆಳ್ತಂಗಡಿ ಭೂನ್ಯಾಯ ಮಂಡಳಿ ತೀರ್ಪು ನೀಡಿರುತ್ತದೆ. ತೀರ್ಪಿನ ವಿರುದ್ಧ ಭೂಮಾಲೀಕರ ಸಂಸ್ಥೆ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ ರಿಟ್ ಅರ್ಜಿಗಳನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿರುವುದು ತಿಳಿದುಬಂದಿರುತ್ತದೆ. ತದನಂತರದಲ್ಲಿ ಸರ್ಕಾರ ರಿಟ್ ಪಿಟಿಷನ್ ಆದೇಶದ ವಿರುದ್ಧ ರಿವ್ಯೂ ಪಿಟಿಷನ್ ಸಲ್ಲಿಸಿ ಹೈಕೋರ್ಟ್‌ನಲ್ಲಿ ತಿರಸ್ಕೃತವಾದ ಕಾರಣ ಸುರ್ಪೀಂಕೋರ್ಟ್‌ನಲ್ಲಿ ಸ್ಪೇಷಲ್ ಲೀವ್ ಪಿಟಿಷನ್ ದಾಖಲಿಸಿರುತ್ತದೆ.
ಕಂಪನಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಯಂತೆ ಹೆಚ್ಚುವರಿ ಜಮೀನನ್ನು ಸರ್ಕಾರದ ವಶಕ್ಕೆ ಒಪ್ಪಿಸಬೇಕಾಗಿರುವುದರಿಂದ ಗೇಣಿದಾರರಲ್ಲದ ತಮ್ಮದೇ ವಲಯದ 53 ಜನರಿಗೆ 537 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲಾಗಿರುತ್ತದೆ ಎನ್ನುವುದು ಸರ್ಕಾರದ ವಾದವಾಗಿದ್ದು ಭೂ ನ್ಯಾಯ ಮಂಡಳಿಯಿಂದ ಮಂಜೂರಾಗಿರುವ ಜಮೀನನ್ನು ರದ್ದುಗೊಳಿಸಲು ಪ್ರಯತ್ನ ನಡೆಸಿರುತ್ತದೆ. ಆದರೆ ಮಲೆಕುಡಿಯ ಜನಾಂಗ ವಾಸಿಸುವ ಬಂಜಾರು ಮಲೆಕುಡಿಯು ಸಮುದಾಯ ಕಾಲೋನಿಯ 37 ಕುಟುಂಬಗಳಿಗೆ ಮಂಜೂರಾಗಿರುವ ಜಮೀನಿನ ವಿರುದ್ಧ ರಾಜ್ಯ ಸರ್ಕಾರ ದಾಖಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಈ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕೆಂದು ಶೂನ್ಯವೇಳೆಯಲ್ಲಿ ಹರಿಪ್ರಸಾದ್ ಒತ್ತಾಯಿಸಿದ್ದಾರೆ. ಹರಿಪ್ರಸಾದ್ ಅವರಿಗೆ ಇತ್ತೀಚೆಗಷ್ಟೇ ಶೇಖರ್ ಲಾಯಿಲ ಮನವಿ ಸಲ್ಲಿಸಿದ್ದರು.