ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾ ದಿನಾಚರಣೆಯನ್ನು ಅದ್ದೂರಿಯಾಗಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಧ್ವಜಾರೋಹಣ ಮಾಡುವುದರ ಮುಖಾಂತರ ಪ್ರತಿಭಾ ದಿನಾಚರಣೆಯ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆದರು.
ಕಾರ್ಯಕ್ರಮವು ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಶಾಲೆಯ ಸಾಧನೆ ಹಾಗೂ ವಿದ್ಯಾರ್ಥಿಗಳ ಕುರಿತಾಗಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಆಗಮಿಸಿ ಶಾಲಾ ಹಸ್ತಪ್ರತಿ ಪತ್ರಿಕೆಯಾದ ಟ್ಯಾಲೆಂಟ್ ಹಾಗೂ ಕನಸು ಇವುಗಳನ್ನು ಅನಾವರಣಗೊಳಿಸಿದರು.
ಎಸ್.ಎಸ್,ಎಲ್.ಸಿ ಯಲ್ಲಿ ಡಿಸ್ಟಿಂಕ್ಷನ್ ಪಡೆದವರಿಗೆ ಮಾತೃಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ತರಗತಿಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ, ರಾಜ್ಯಮಟ್ಟ ಜಿಲ್ಲಾ ಮಟ್ಟ ಇತ್ಯಾದಿಗಳಲ್ಲಿ ಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.
ಶ್ರೀಮತಿ ಚಿತ್ರ ಭಿಡೆ, ಹರಿಪ್ರಸಾದ್ ಅರ್ಮುಡಿತ್ತಾಯ , ಶ್ರೀಮತಿ ಕೇಶವತಿ, ಜೀವಂಧರ್ ಕುಮಾರ್ , ಡಾ. ರಜತಾ ಪಿ ಶೆಟ್ಟಿ, ಶ್ರೀಮತಿ ರೇಷ್ಮಾ, ರವಿಪ್ರಕಾಶ್ ರೈ, ಶ್ರೀಮತಿ ಧನಲಕ್ಷ್ಮಿ ಡಿ, ಮುಂತಾದ ಗಣ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ , ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಧನ್ಯ ಕುಮಾರ್ , ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿಮಲ ,ಸಿ ಆರ್ ಪಿ ಪ್ರತಿಮಾ, ದೇವಳದ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಹಾಗೂ ಶಿಕ್ಷಕ ವೃಂದ ದವರು ,ಅನೇಕ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.