ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾರ್ ಅವರ ಪ್ರೋತ್ಸಾಹದಿಂದ ಬೆಳ್ತಂಗಡಿಯಲ್ಲಿ ಎಸ್.ಡಿ.ಎಂ. ಕಲಾಭವನದಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಲಯಮಟ್ಟದ ಜಿನಭಜನಾ ಸ್ಪರ್ಧೆಯು ಅತ್ಯಂತ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆದು ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಜಿನಭಜನಾ ಸ್ಪರ್ಧೆಯ ಸಂಯೋಜಕರಾದ ಸೋನಿಯಾ ಯಶೋವರ್ಮ ಹೇಳಿದರು.
ಅವರು ಡಿ.18 ರಂದು ಉಜಿರೆಯಲ್ಲಿ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ವಿವಿಧ ಸಮಿತಿಗಳ ಮುಖ್ಯಸ್ಥರು ಮತ್ತು ಸದಸ್ಯರು ಹಾಗೂ ಸ್ವಯಂಸೇವಕರ ಸೌಜನ್ಯಪೂರ್ಣ ಸೇವೆ, ಸಹಕಾರವನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
ಬೆಳ್ತಂಗಡಿಯ ಜೀವಂಧರಕುಮಾರ್, ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ಗ್ರಂಥಪಾಲಕಿ ಡಾ. ರಜತಾ ಜೈನ್‌ಮಿಲನ್ ನಿರ್ದೇಶಕರುಗಳಾದ ಪ್ರಾಂಶುಪಾಲ ಬಿ. ಪ್ರಮೋದ್ ಕುಮಾರ್ ಮತ್ತು ಬಿ. ಸೋಮಶೇಖರ ಶೆಟ್ಟಿ ತಮ್ಮ ಅನಿಸಿಕೆ, ಅಭಿಪ್ರಾಯ ವ್ಯಕ್ತಪಡಿಸಿದರು.
ಲೆಕ್ಕಪತ್ರ ಮಂಡಿಸಿದ ಕೋಶಾಧಿಕಾರಿ ನಿತಿನ್ ಜೈನ್ ಎಲ್ಲಾ ವೆಚ್ಚಗಳನ್ನು ಕಳೆದು ರೂ. 90,748 ಉಳಿಕೆಯಾಗಿದೆ ಎಂದರು.
ಜಿನಭಜನೆಗಳಿಗೆ ರಾಗ ಸಂಯೋಜನೆ ಮಾಡಿ ಸಹಕರಿಸಿದ ಕಮಲಾಕ್ಷ ಮತ್ತು ಪಾರ್ಶ್ವನಾಥ್ ಜೈನ್ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆ ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷರಾದ ಉಜಿರೆಯ ಡಾ. ನವೀನ್ ಕುಮಾರ್ ಜೈನ್ ಮಾತನಾಡಿ ಸರ್ವರ ಸಕ್ರಿಯ ಸಹಕಾರದಿಂದ ಜಿನಭಜನಾ ಸ್ಪರ್ಧೆ ಯಶಸ್ವಿಯಾಗಿ ನಡೆದು ಎಲ್ಲರ ಮುಕ್ತಪ್ರಶಂಸೆಗೆ ಪಾತ್ರವಾಗಿದೆ. ಇದೊಂದು ಮಾದರಿ ಕಾರ್ಯಕ್ರಮ ಎಂದು ಎಲ್ಲರೂ ಶ್ಲಾಘಿಸಿದ್ದಾರೆ. ಮುಂದೆ ಇನ್ನೂ ಹೆಚ್ಚಿನ ಕಾರ್ಯಕ್ರಮ ರೂಪಿಸಲು ತಮಗೆ ಉತ್ಸಾಹ, ಪ್ರೇರಣೆ ದೊರಕಿದೆ ಎಂದರು.
ಸದ್ಯದಲ್ಲೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಸಲು ಯೋಜಿಸಲಾಗಿದೆ ಎಂದು ಅವರು ಪ್ರಕಟಿಸಿದರು.
ಕರ‍್ಯದರ್ಶಿ ಸಂಪತ್ ಕುಮಾರ್ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವಿತ್ತರು.
ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮ ಸಾಮೂಹಿಕ ಶಾಂತಿಮಂತ್ರ ಪಠಣದೊಂದಿಗೆ ಮುಕ್ತಾಯವಾಯಿತು.