ನಾರಾವಿ: ಪರಸ್ಪರ ಯುವಕ ಮಂಡಲ ಈದು-ನಾರಾವಿ ಇದರ ನೇತೃತ್ವದಲ್ಲಿ ವೇದಮೂರ್ತಿ ಕೃಷ್ಣ ತಂತ್ರಿಯವರ ಪೌರೋಹಿತ್ಯದಲ್ಲಿ ಡಿ.22 ರಂದು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಐದು ಮಾಗಣೆಯ ಗ್ರಾಮಸ್ಥರಿಂದ ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ಮಹಾ ಚಂಡಿಕಾಯಾಗದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆಯು ಡಿ.21 ರಂದು ಅರಸುಕಟ್ಟೆಯಿಂದ ಮೆರವಣಿಗೆ ಪ್ರಾರಂಭಗೊಂಡು ಶ್ರೀ ಸೂರ್ಯನಾರಾಯಣ ದೇವಸ್ಥಾನದವರೆಗೆ ನಡೆಯಿತು.
ವಿಜೃಂಭಣೆಯಿಂದ ನೆರವೇರಿದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಕೀಳುಕುದುರೆ, ಚೆಂಡೆ, ಸುಡುಮದ್ದು, ಆಕರ್ಷಣೆಯ ಗೊಂಬೆಗಳು, ಮುದ್ದು ಶಾರದೆ, ಬಂಗಾಳಿ ಟೈಗರ್, ಕೇರಳದ ಪ್ರಸಿದ್ದ ವಯೊಲಿನ್ ವಾದಕಿ ಅಧ್ಯಾ ವಿಜಯನ್ ರವರ ವಯೊಲಿನ್ ವಾದನ ನೋಡುಗರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಸುಮಾರು ಐದು ಸಾವಿರ ಮಂದಿ ಭಕ್ತರು ಭಾಗಿಯಾದರು.
ಮೆರವಣಿಗೆಯ ಬಳಿಕ ವೀರ ಸಾವರ್ಕರ್ ವೇದಿಕೆಯಲ್ಲಿ ವಯೊಲಿನ್ ವಾದಕಿ ಅಧ್ಯಾ ವಿಜಯನ್ ರವರ ವಯೊಲಿನ್ ವಾದನ ಮತ್ತು ಚೆಂಡೆ ಪ್ರದರ್ಶನ ನಡೆಯಿತು.