ಉಜಿರೆ : ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸೇವೆಯ ಮನೋಭಾವನೆ ಉತ್ಕಟವಾಗಿದ್ದು ಆರಂಭದಲ್ಲಿ ಎಂತಹ ವ್ಯಕ್ತಿತ್ವ ಇದ್ದರೂ ಸಹ ಸ್ಕೌಟ್ಸ್ ಮತ್ತು ಗೈಡ್ಸ್ ಜೀವನಕ್ಕೆ ಅಡಿ ಇಟ್ಟ ನಂತರ ಅವರ ಜೀವನ ಉತ್ತಮ ನಡುವಳಿಕೆಯತ್ತ ಪರಿವರ್ತನೆ ಆಗುತ್ತದೆ ಅಂತಹ ಶಿಸ್ತನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸುತ್ತದೆ ಎಂದು ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ರಾಜೇಶ ಬಿ ಹೇಳಿದರು.
ಅವರು ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ನೀಡುವ “ ದೀಕ್ಷಾ ಸಮಾರಂಭದಲ್ಲಿ” ಮುಖ್ಯ ಅತಿಥಿಯಾಗಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಯಾವಾಗಲೂ ಶಿಸ್ತು ಬದ್ಧರಾಗಿದ್ದು ಅವರು ಇತರೆ ವಿದ್ಯಾರ್ಥಿಗಳಿಗೆ ಪ್ರೇರಕರಾಗಿರಬೇಕು, ನಿಮ್ಮಲ್ಲಿ ದೇಶಪ್ರೇಮ, ಪರೋಪಕಾರ ಹಾಗೂ ಸೇವಾ ಮನೋಭಾವ ಯಾವತ್ತೂ ಇತರರಿಗೆ ಮಾದರಿಯಾಗಿರುತ್ತದೆ. ಯಾವಾಗ ನೀವು ಸ್ಕೌಟ್ ಗೈಡ್ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿರೋ ಅವಾಗ ನಿಮ್ಮ ವ್ಯಕ್ತಿತ್ವ ಪರಿಪೂರ್ಣವಾಗಿ ಪರಿಪಕ್ವಗೊಳ್ಳುತ್ತದೆ ಆದ್ದರಿಂದ ನಿಮ್ಮ ಸಕ್ರಿಯ ತೊಡಗಿಸಿಕೊಳ್ಳುವಿಕೆ ಬಹಳ ಮಹತ್ವ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.
ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಯುನಿಟ್ ಲೀಡರ್ಗಳಾದ ಲಕ್ಷ್ಮಿಶ್ ಭಟ್ ಮತ್ತು ಶ್ರೀಮತಿ ಅಂಕಿತಾ ಎಮ್ ಕೆ ಇವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ವಿದ್ಯಾರ್ಥಿಗಳು ರೋವರ್ಸ್ ರೇಂಜರ್ಸ್ ದೀಕ್ಷೆ ಯನ್ನು ತೆಗೆದುಕೊಂಡು ಪ್ರತೀಜ್ಞಾ ವಿಧಿ ಗೈದರು.