25.3 C
ಪುತ್ತೂರು, ಬೆಳ್ತಂಗಡಿ
April 4, 2025
ಧಾರ್ಮಿಕ

ಕಳಿಯ ಮೂಡಾಯಿಪಲ್ಕೆ ಉದ್ಭವ ಶ್ರೀ ಆದಿಲಿಂಗೇಶ್ವರ ಕ್ಷೇತ್ರದ ವಾರ್ಷಿಕ ಉತ್ಸವದಲ್ಲಿ ನಲಿಕೆ ಸಮುದಾಯದ ನರ್ತಕರು ಹಾಗೂ ಸಮಾಜ ಬಾಂಧವರು ಭಾಗವಹಿಸುವುದಿಲ್ಲ : ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್. ಪ್ರಭಾಕರ್ ಸ್ವಷ್ಟನೆ


ಬೆಳ್ತಂಗಡಿ: ಕಳಿಯ ಗ್ರಾಮದ ಮೂಡಾಯಿಪಲ್ಕೆ ಎಂಬಲ್ಲಿರುವ ಉದ್ಭವ ಶ್ರೀ ಆದಿಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಜರುಗುವ ಏಳನೇ ವರ್ಷದ ವಾರ್ಷಿಕ ಉತ್ಸವದಲ್ಲಿ ನಲಿಕೆ ಸಮುದಾಯದವರು ಗುಳಿಗ ನೇಮವನ್ನು ಕಟ್ಟದಂತೆ ಹಾಗೂ ಭಾಗವಹಿಸದಂತೆ ಮಾನ್ಯ ಬೆಳ್ತಂಗಡಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ತಾತ್ಕಾಲಿಕ ನಿರ್ಬಂಧಕಾಜ್ಞೆ ತಂದಿರುವುದರಿಂದ ನಲಿಕೆ ಸಮುದಾಯದ ನರ್ತಕರು ಹಾಗೂ ಸಮಾಜ ಬಾಂಧವರು, ಸಂಘದವರು ಸದ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್. ಪ್ರಭಾಕರ ಸ್ವಷ್ಟನೆ ನೀಡಿದ್ದಾರೆ.

ಅವರು ಡಿ.27ರಂದು ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ತುಳುನಾಡು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭೂತಾರಾಧನೆ ಪ್ರಖ್ಯಾತಿಯನ್ನು ಪಡೆದಿದೆ. ಆದಿ ಪುರಾತನ ಕಾಲದಿಂದಲೂ, ನಮ್ಮ ಗುರುಹಿರಿಯರ ಕಾಲದಿಂದಲೂ ಭೂತಾರಾಧನೆ ನರ್ತನವು ಮೂರು ಜನಾಂಗದ ಕುಲಕಸುಬು ಆಗಿರುತ್ತದೆ. ನಲಿಕೆ, ಪರವ, ಪಂಬದ ಈ ಮೂರು ಸಮುದಾಯಗಳು ಬಹಳ ಭಕ್ತಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನರ್ತನ ಸೇವೆಯನ್ನು ಇಂದಿನವರೆಗೂ ನಡೆಸಿಕೊಂಡು ಬಂದಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವಗಳಿಗೆ ಅಪಮಾನ, ಅವಮಾನ ಹಾಗೂ ದಬ್ಬಾಳಿಕೆಗಳು ನಿರಂತರ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣದಿಂದ ಅತೀ ಹೆಚ್ಚು ನಮ್ಮ ತುಳುನಾಡಿನ ಆರಾಧಕರಿಗೂ, ನರ್ತಕರಿಗೂ ತುಂಬಾ ನೋವುಂಟು ಮಾಡುವ ಸನ್ನಿವೇಶಗಳು ಉದ್ಭವಿಸಿರುತ್ತದೆ ಎಂದು ತಿಳಿಸಿದರು.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಮೂಡಾಯಿಪಲ್ಕೆ ಎಂಬಲ್ಲಿ ಉದ್ಭವ ಶ್ರೀ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ದೇವರಿಗೂ ಹಾಗೂ ದೈವಗಳಿಗೆ ಪೂಜಾ ವಿಧಿವಿಧಾನಗಳನ್ನು ಮಾಡಿ, ರಾತ್ರಿ ಅವರು ನಂಬುವ ದೈವಗಳಿಗೆ ಪರ್ವ ಸೇವೆ ಹಾಗೂ ನೇಮೋತ್ಸವ ಕಳೆದ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ 9 ದೈವಗಳು ಇದ್ದು, ಅದರಲ್ಲಿ ಗುಳಿಗ ದೈವಕ್ಕೆ ಮಾತ್ರ ನೇಮೋತ್ಸವ ನಡೆಯುತ್ತಿದೆ. ಉಳಿದ ದೈವಗಳಿಗೆ ಪರ್ವಸೇವೆ, ಅಗೇಲು ಸೇವೆ ಮಾತ್ರ ನಡೆಸುತ್ತಾರೆ. ಗುಳಿಗ ದೈವದ ಕೋಲವನ್ನು ಪುರಾತನ ಕಾಲದಿಂದಲೂ ಒಂದೇ ಸಮುದಾಯ ಅದು ನಲಿಕೆ ಸಮುದಾಯ ಮಾತ್ರ ಕಟ್ಟುವುದು. ಗುಳಿಗ ದೈವದ ಆರಾಧಕರು ಎಲ್ಲಾ ಜಾತಿ, ಸಮುದಾಯಗಳಲ್ಲೂ ಇದ್ದಾರೆ. ಆದರೆ ನೇಮವನ್ನು ನಲಿಕೆ ಸಮುದಾಯದವರು ಮಾತ್ರ ಕಟ್ಟುವುದು. ಮೊಗೇರ ಸಮುದಾಯದ ಒಂದು ಮನೆಯವರು (ರುಕ್ಮಯ್ಯ ಮತ್ತು ಅವರ ಮಗ ಚಿತ್ತರಂಜನ್ ಹಾಗೂ ಮನೆಯವರು ಮಾತ್ರ) ಗುಳಿಗ ದೈವಕ್ಕೆ ಕಟ್ಟುತ್ತಿದ್ದಾರೆ ಇದು ಬೇಸರದ ಸಂಗತಿಯಾಗಿದೆ. ಈ ಬಗ್ಗೆ ಶ್ರೀ ಉದ್ಭವ ಆದಿಲಿಂಗೇಶ್ವರ ಇದರ ಗುರಿಕಾರರು, ಅಧ್ಯಕ್ಷರು ಆದ ರುಕ್ಕಯ್ಯ ಎಂ ಹಾಗೂ ಅವರ ಮಗ ಚಿತ್ತರಂಜನ್ ಹಾಗೂ ಮನೆಯವರೊಂದಿಗೆ ನಾವು ಚರ್ಚಿಸಿ ತೀರ್ಮಾನಿಸಿದಂತೆ, ಕಳೆದ ಸಲ ನೇಮೋತ್ಸವವನ್ನು ಅವರು ಸ್ವ ಇಚ್ಛೆಯಿಂದ ನಿಲ್ಲಿಸುತ್ತೇವೆ ಎಂದು ನಮ್ಮ ನಲಿಕೆ ಸಂಘದ ಸಮುದಾಯ ಭವನದ ಅಂಗಳದಲ್ಲಿ ಆರಾಧಿಸಿಕೊಂಡು ಬಂದಿರುವ ಶ್ರೀ ಗುಳಿಗ ದೈವದ ಸನ್ನಿಧಿಯಲ್ಲಿ ಒಪ್ಪಿಕೊಂಡು, ದೈವದ ಹೆಸರಲ್ಲಿ ತಪ್ಪು ಕಾಣಿಕೆ ಹಾಕಿರುತ್ತಾರೆ ಎಂದು ತಿಳಿಸಿದರು.

ಈಗ ಮಾನ್ಯ ಬೆಳ್ತಂಗಡಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ತಾತ್ಕಾಲಿಕ ನಿರ್ಬಂಧಕಾಜ್ಞೆ ಇರುವುದರಿಂದ ನಾವು ನಲಿಕೆ ಸಮುದಾಯದ ನರ್ತಕರು ಹಾಗೂ ಸಮಾಜ ಬಾಂಧವರು, ಸಂಘದವರು ಸದ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಮುಂದಿನ ತೀರ್ಮಾನವು ನ್ಯಾಯಲಯದಲ್ಲಿ ಇತ್ಯರ್ಥವಾಗಲಿದೆ ಎಂದು ಹೇಳಿದರು. ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ನಲಿಕೆಯವರು ಮಾತನಾಡಿ, ನಮ್ಮ ಪೂರ್ವಜರಿಂದ ಈ ಕಟ್ಟುಪಾಡುಗಳು ನಡೆದುಕೊಂಡು ಬಂದಿದೆ. ಗುಳಿಗ ದೈವಕ್ಕೆ ನಲಿಕೆ ಸಮಾಜದವರು ಮಾತ್ರ ಕಟ್ಟುವ ಸಂಪ್ರದಾಯ ಇರುವುದು. ಆದರೆ ಕಳಿಯದಲ್ಲಿ ಮೊಗೇರ ಸಮುದಾಯದ ಒಂದು ಮನೆಯವರು ಮಾತ್ರ ಇದನ್ನು ಮಾಡುತ್ತಿದ್ದಾರೆ ಅವರು ಆರಾಧನೆ ಮಾಡಲಿ ದೈವಕ್ಕೆ ಕಟ್ಟುವುದು ನಲಿಕೆ ಸಮುದಾಯದ ನತ೯ಕರೇ ಕಟ್ಟಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೈವರಾಧನಾ ಸಮಿತಿ ದ.ಕ ಜಿಲ್ಲಾಧ್ಯಕ್ಷ ಜನಾರ್ದನ ಬುಡೋಳಿ, ತಾಲೂಕು ಸಂಘದ ಉಪಾಧ್ಯಕ್ಷ ರಾಮು ಶಿಶಿಲ, ಸದಸ್ಯ ವಿನಯಕುಮಾರ್ , ದೈವನತ೯ಕ ಕೊರಗಪ್ಪ ಕಲ್ಲಡ್ಕ ಉಪಸ್ಥಿತರಿದ್ದರು. ವಿನಯ ಕುಮಾರ್ ಸ್ವಾಗತಿಸಿದರು.

Related posts

ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ: ಕಲಶಾಭಿಷೇಕ, ದರ್ಶನ ಬಲಿ

Suddi Udaya

ಕುವೆಟ್ಟು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ 12ನೇ ವರ್ಷದ ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆಯ ಪೂರ್ವಭಾವಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ, ದುರ್ಗಾಪೂಜೆ

Suddi Udaya

ಬೆಳ್ತಂಗಡಿಯ 77 ಮೊಹಲ್ಲಾಗಳ ಖಾಝಿಯಾಗಿ ಎ.ಪಿ ಉಸ್ತಾದ್ ಅಧಿಕಾರ ಸ್ವೀಕಾರ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ಹಸ್ತಾಂತರ

Suddi Udaya

ನಾಳ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya
error: Content is protected !!