25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಪೆರಾಲ್ದರಕಟ್ಟೆ ಮಸ್ಜಿದ್‌ನಲ್ಲಿ ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಸಭೆ

ಬೆಳ್ತಂಗಡಿ: ವೈವಾಹಿಕ ವಿಚಾರ ಹಾಗೂ ಇತರ ದೈನಂದಿನ ವಿಚಾರಗಳಲ್ಲಿ ಇಸ್ಲಾಂನಲ್ಲಿ ದುಂದುವೆಚ್ಚಕ್ಕೆ ಅವಕಾಶವೇ ಇಲ್ಲದ ಅತ್ಯಂತ ಸರಳ ಕ್ರಮಗಳಿವೆ. ಆದರೆ ಆಧುನಿಕ ಐಶಾರಾಮಿ ಸಂಸ್ಕೃತಿಯ ಅನುಕರಣೆಯ ಪರಿಣಾಮದಿಂದಾಗಿ ಧರ್ಮದ ಚೌಕಟ್ಟು ಮೀರಿದ ನಡೆಯಿಂದ ಸಮುದಾಯ ಅದಪತನದತ್ತ ಮುಖ ಮಾಡಿದೆ ಎಂದು ಕಕ್ಕಿಂಜೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಪ್ರಧಾನ ಧರ್ಮಗುರು ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಎಚ್ಚರಿಸಿದರು.

ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ, ಎಸ್ಕೆಎಸ್ಸೆಸ್ಸೆಫ್ ಪೆರಾಲ್ದರಕಟ್ಟೆ ಶಾಖೆ ಹಾಗೂ ಬದ್ರಿಯಾ ಯಂಗ್‌ಮೆನ್ಸ್ ಪೆರಾಲ್ದರ ಕಟ್ಟೆ ಇದರ ಜಂಟಿ ಆಶ್ರಯದಲ್ಲಿ, ಪ್ರಸ್ತುತ ಮುಸ್ಲಿಮ್ ಸಮಾಜದಲ್ಲಿ ಸಮಾಜಿಕ ಪಿಡುಗಾಗಿ ನೆಲೆ ನಿಂತಿರುವ ಮಾದಕ ವ್ಯಸನ ಮತ್ತು ಮದುವೆ ಅನಾಚಾರದ ವಿರುದ್ಧ ಜಾಗೃತಿ ಸಭೆಯಲ್ಲಿ ಅವರು ಸಂಪನ್ಮೂಲ ಉಪನ್ಯಾಸ ನೀಡುತ್ತಿದ್ದರು.

ಸಮಾಜಕ್ಕೆ ಬುದ್ದಿಹೇಳುವವರು ಸಾಕಾಗದು ಕಾರ್ಯರೂಪಕ್ಕೆ ಅನುಷ್ಠಾನಿಸಿ ತೋರಿಸುವವರು ಬೇಕು. ಮದುವೆ ಎಂಬುದು ಸಾಮಾಧಾನಕ್ಕಾಗಿ ನೆಮ್ಮದಿಗಾಗಿ ತೃಪ್ತಿಗಾಗಿ ನೆಬಿಯವರ ಸುನ್ನತ್ ಆಗಿ ಅಲ್ಲಾಹು ಇಸ್ಲಾಂನಲ್ಲಿ ಮಾರ್ಗದರ್ಶಿಸಿದ ಧಾರ್ಮಿಕ ಕ್ರಮ ಎಂಬುದನ್ನು ಸದಾ ಅರಿತಿರಬೇಕು ಎಂದವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಪೆರಾಲ್ದರಕಟ್ಟೆ ಮಸ್ಜಿದ್ ಧರ್ಮಗುರು ಶಂಶುದ್ದೀನ್ ದಾರಿಮಿ ಮಾತನಾಡಿ, ಫ್ಯಾಶನ್ ಹೆಸರಿನಲ್ಲಿ ನವ ಸಂಸ್ಕಾರಗಳನ್ನು ಅನುಸರಿಸಿದ್ದರಿಂದ ಇದು ಸಮುದಾಯವನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಸಾಮಾಜಿಕ ಜಾಗೃತಿಯಿಂದ ವರದಕ್ಷಿಣೆ ಪಿಡುಗು ತೊಲಗಿಸಿದಂತೆ ಮದುವೆ ಅನಾಚಾರ, ವ್ಯಸನವನ್ನೂ ಹಿಮ್ಮೆಟ್ಟಿಸೋಣ ಎಂದರು.

ಮಾದಕ ವ್ಯಸನ ವಿಷಯದಲ್ಲಿ ಭಾಷಣ ಮಾಡಿದ ಖ್ಯಾತ ವಿಶ್ಲೇಷಕ ರಫೀಕ್ ಮಾಸ್ಟರ್ ಆತೂರು ರವರು, ಸಮದಾಯದ ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆ ಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ಸ್ಥಳದಲ್ಲಿ ಇಂತಹಾ ಪಿಡುಗಿನ ಬಗ್ಗೆ ಅರಿವು ಮೂಡಿಸುವ ಸನ್ನಿವೇಶ ನಿರ್ಮಾಣವಾದುದಕ್ಕೆ ಖೇದವಿದೆ. ಆದರೂ ಕಟ್ಟೆ ಜಮಾಅತ್ ನ ಈ ಕ್ರಾಂತಿಕಾರಿ ಹೆಜ್ಜೆ ಅನುಕರಣೀಯ. ನಮ್ಮ ಮಕ್ಕಳು ಎಲ್ಲಿದ್ದಾರೆ ಯಾರೊಂದಿಗಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದನ್ನು ಹೆತ್ತವರು ಗಮನಿಸುತ್ತಲೇ ಇರದಿದ್ದರೆ ಅಪಾಯ ಕಾದಿದೆ. ನಾವು ಯಾರೊಂದಿಗೆ ಸೇರಿಕೊಳ್ಳುತ್ತೇವೋ ಅದರ ಮೇಲೆ ನಮ್ಮ ಭವಿಷ್ಯ ಮತ್ತು ವ್ಯಕ್ತಿತ್ವ ಅಡಗಿರುತ್ತದೆ. ಮಕ್ಕಳ ಗೆಳೆಯರು ಎಂತವರು ಎಂಬುದನ್ನು ನಿರಂತರ ಗಮನಿಸಬೇಕು ಎಂದು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.

ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬದ್ರಿಯಾ ಜುಮಾ ಮಸ್ಜಿದ್ ಪೆರಾಲ್ದರಕಟ್ಟೆ ಇದರ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ನಿಶ್ಚಿತಾರ್ಥ ಮತ್ತು ಮದುವೆ ಅನಾಚಾರಗಳಬಗ್ಗೆ ನಾನು ಮಾಡಿದ ಭಾಷಣವೊಂದು ಭಾರೀ ಪ್ರಚಾರ ಪಡೆದಿದ್ದರೆ ಅದಕ್ಕೆ ಕಾರಣ ಅದರ ಹಿಂದೆ ಇರುವ ವಿವಾಹವಾಗದ ಯುವಕರ ಧ್ವನಿಯಾಗಿದೆ. ಕ್ಲಿಷ್ಟ ವಿಚಾರವಾದರೂ ಈ ಅಭಿಯಾನವನ್ನು ನಾವು ಇಲ್ಲಿಂದ ಕೈ ಗೆತ್ತಿಕೊಂಡಿದ್ದು ಇದರ ಸಮಾರೋಪ ಪ್ರತೀ ಮೊಹಲ್ಲಾಗಳಲ್ಲಿ ಆಗಲಿ.ಇದೊಂದು ಜನಾಂದೋಲನವಾಗಿ ರೂಪು ಪಡೆಯಲಿ. ಸುಂದರ ಕನಸು ಕಟ್ಟಿಕೊಂಡ ವಿದ್ಯಾರ್ಥಿಗಳು ವ್ಯಸನಕ್ಕೆ ಬಲಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.

ತುರ್ತು ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಟ್ಟೆ ರೆಸ್ಕ್ಯೂ ತಂಡದ ಆಸಿಫ್ ಮತ್ತು ಬಳಗದವರನ್ನು ವೇದಿಕೆಯಲ್ಲಿ ಗುರುತಿಸಲಾಯಿತು. ಇವರ ಕಾರ್ಯಾಚರಣೆಯ ಪರಿಕರಗಳ ಖರೀದಿಗೆ ಎಸ್.ಎಮ್ ಮಾರ್ಟ್ ಮಾಲಿಕ ಪಿ.ಕೆ ಶರೀಫ್ ಅವರು ಸ್ಥಳದಲ್ಲೆ ರೂ.10 ಸಾವಿರ ನೆರವು ಘೋಷಿಸಿದರು. ಸಭೆಯ ಕೊನೆಗೆ ಮುಂಡೂರು ತಂಙಳ್ ದುಆ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಇಸ್ಮಾಯಿಲ್ ಪೆರಿಂಜೆ ಮತ್ತು ಕುವೆಟ್ಟು ಗ್ರಾ.ಪಂ ಸದಸ್ಯ ಮುಸ್ತಫಾ ಜಿ.ಕೆರೆ ಶುಭ ಕೋರಿದರು.

ವೇದಿಕೆಯಲ್ಲಿ ರಝಾಕ್ ಕನ್ನಡಿಟ್ಟೆ, ಅಬ್ದುಲ್ ಕರೀಂ ಗೇರುಕಟ್ಟೆ, ಇಸ್ಮಾಯಿಲ್ ಸಂಜಯನಗರ, ಆಸಿಫ್ ಅಳದಂಗಡಿ, ರಮ್ಲಾನ್ ಮುಂಡೂರು, ಮೋನು ಪಿಲ್ಯ, ಮುಸ್ತಫಾ ಮಂಜೊಟ್ಟಿ, ಹಕಿಂ ಸುನ್ನತ್‌ಕೆರೆ, ಹಮೀದ್ ಕೆರೆಕೋಡಿ, ನಿಝಾಮ್ ಕಟ್ಟೆ, ರಿಯಾಝ್ ಮಂಜೊಟ್ಟಿ, ಅಬ್ದುಲ್ ಫತ್ತಾಹ್ ಫೈಝಿ, ಸುಲೈಮಾನ್, ಸಿದ್ದೀಕ್ ಮಸೀದಿಬಳಿ, ಅಬ್ಬಾಸ್ ಪಜೆಮಾರ್, ಶೇಖಬ್ಬ ಹಾಜಿ, ಅಶ್ರಫ್ ಗುಂಡೇರಿ, ಶಂಶುದ್ದೀನ್ ತಮುನಾಕ, ಹಾಜಿ ಅಬ್ದುಲ್ ಕರೀಂ ಕಾರಂದೂರು, ಹಾಜಿ ಶಮೀಮ್ ಯೂಸುಫ್, ಹಾಜಿ ಅಬೂಬಕ್ಕರ್ ಮಂಜೊಟ್ಟಿ, ಹನೀಫ್ ಪುಂಜಾಲಕಟ್ಟೆ, ಸಿರಾಜ್ ಚಿಲಿಂಬಿ ಮದ್ದಡ್ಕ, ಅಝೀಝ್ ಬಳಂಜ ಮೊದಲಾದವರು ಉಪಸ್ಥಿತರಿದ್ದರು.
ಪ್ರ. ಕಾರ್ಯದರ್ಶಿ ಸಾದಿಕ್ ಸ್ವಾಗತಿಸಿ, ಅಶ್ರಫ್ ಆಲಿಕುಂಞ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

Related posts

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಪನ್ನ

Suddi Udaya

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಸಂಪೂರ್ಣ ಬೆಂಬಲ

Suddi Udaya

ಗುರುವಾಯನಕೆರೆ: ಏಕದಿನ ಶೈಕ್ಷಣಿಕ ಸಮ್ಮೇಳನ ಸಮಾರೋಪ: ಪಠ್ಯಪುಸ್ತಕ ರಚನೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು: ಎಮ್.ಎಲ್.ಸಿ ಭೋಜೇ ಗೌಡ

Suddi Udaya

ಇಂದಬೆಟ್ಟು ಶ್ರೀ ವೀರಭದ್ರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ವಕೀಲರ ಸಂಘದಿಂದ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರ ಭೇಟಿ

Suddi Udaya

ನಾರಾವಿ ತುಳು ಶಿವಳ್ಳಿ ವಲಯದ ಆಟಿಡೊಂಜಿ ದಿನ

Suddi Udaya
error: Content is protected !!