ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ.1ರಿಂದ ಡಯಾಲಿಸಿಸ್ ಉಚಿತ ಸೇವೆ ಪ್ರಾರಂಭಗೊಳ್ಳಲಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಮೂಲಕ ಹಲವಾರು ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಲಕ್ಷಾಂತರ ಬಡವರ ಬಾಳಿಗೆ ಬೆಳಕು ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಲಕ್ಷ ದೀಪೋತ್ಸವದ ಸಂದರ್ಭ ನಡೆದ ಸರ್ವಧರ್ಮ ಸಮ್ಮೇಳ ನದಲ್ಲಿ ಜ.1ರಿಂದ ಉಜಿರೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಉಚಿತ ಸೇವೆ ನೀಡುವುದಾಗಿ ಘೋಷಿಸಿ ದ್ದರು.
ಬೆಳ್ತಂಗಡಿ ತಾಲೂಕಿನಲ್ಲಿ ಅನೇಕ ಮಂದಿ ಡಯಾಲಿಸಿಸ್ ಸೇವೆಯನ್ನು ಬೇರೆ ಬೇರೆ ಕಡೆ ಪಡೆಯುತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶ ಇರುವುದರಿಂದ ಬೆಳ್ತಂಗಡಿ ತಾಲೂಕಿನ ಅನೇಕರು ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿರುವ ಪರಿಸ್ಥಿತಿ ಇದೆ. ಧರ್ಮಾಧಿಕಾರಿಗಳ ಈ ಮಾನವೀಯ ಸೇವೆ ತಾಲೂಕಿನ ಅನೇಕರಿಗೆ ಅನುಕೂಲ ಕಲ್ಪಿಸಲಿದೆ. ಉಜಿರೆ ಆಸ್ಪತ್ರೆಯಲ್ಲಿ 11 ಡಯಾಲಿಸಿಸ್ ಯಂತ್ರಗಳಿದ್ದು, ವರ್ಷದಲ್ಲಿ 10 ಸಾವಿರ ಮಂದಿಗೆ ಡಯಾಲಿಸಿಸ್ ಮಾಡಬಹುದಾಗಿದೆ.
ವಾರ್ಷಿಕ 1.50 ಕೋಟಿ ರೂ. ವೆಚ್ಚ: ಡಯಾಲಿಸಿಸ್ ವೆಚ್ಚ ಒಬ್ಬರಿಗೆ ಒಂದು ಬಾರಿಗೆ 1,500 ರೂ. ಇದ್ದು, ಇನ್ನು ಮುಂದೆ ಉಚಿತ ವಾಗಿ ಸೇವೆ ಸಿಗಲಿದೆ. ತಿಂಗಳಿಗೆ ಒಬ್ಬರಿಗೆ 12ರಿಂದ 24 ಸಾವಿರ ರೂ. ವೆಚ್ಚ ಉಳಿತಾಯವಾಗಲಿದೆ. ಈ ಯೋಜನೆಗೆ ವಾರ್ಷಿಕವಾಗಿ 1.50 ಕೋಟಿ ರೂ.ಗೂ ಮಿಕ್ಕಿ ವೆಚ್ಚವಾಗುತ್ತದೆ.