ಉಜಿರೆ: ಉಜಿರೆ ಪೆರ್ಲ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಬ್ರಹ್ಮಶ್ರೀ ವೇ| ಮೂ| ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯರ ಉಪಸ್ಥಿತಿಯಲ್ಲಿ ಶ್ರೀ ಲಕ್ಷ್ಮೀಜನಾರ್ದನ ಹಾಗೂ ಶ್ರೀ ಉಮಾಮಹೇಶ್ವರ ಸಾನಿಧ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಮತ್ತು ಶ್ರೀ ಪಂಜುರ್ಲಿ ದೈವದ ಪ್ರತಿಷ್ಠಾ ಮಹೋತ್ಸವ ಶ್ರೀ ಲಕ್ಷ್ಮೀ ಜನಾರ್ದನ ಮತ್ತು ಶ್ರೀ ಉಮಾಮಹೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಜ.2ರಂದು ನಡೆಯಿತು.
ಬೆಳಗ್ಗೆ ಗಣಪತಿ ಹೋಮದಿಂದ ಪ್ರಾರಂಭಿಸಿ ವಿವಿಧ ಹೋಮ-ಹವನ, ಶ್ರೀ ನಾಗ ದೇವರ ಬಿಂಬ ಪ್ರತಿಷ್ಠೆ, ಪಂಜುರ್ಲಿ ದೈವದ ಪದ್ಮಶಿಲಾ ಪ್ರತಿಷ್ಠಾಪನೆ, ಶ್ರೀ ಲಕ್ಷ್ಮೀ ಜನಾರ್ದನ ಮತ್ತು ಶ್ರೀ ಉಮಾಮಹೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಕುಮಾರ್ ಬರಮೇಲು, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರಿನ ಭಕ್ತರು ಉಪಸ್ಥಿತರಿದ್ದರು.