ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಗ್ರಾಮದ ಕೊಕ್ಕಡ ಪೇಟೆಯಲ್ಲಿರುವ ಇಸುಬು ಎಂಬವರ ಬಾಳೆಹಣ್ಣು ಮತ್ತು ಅಡಕೆ ಅಂಗಡಿಯ ಕ್ಯಾಶ್ ನಿಂದ ಅಪರಿಚಿತ ವ್ಯಕ್ತಿ ೨೦೨೪ರ ನ.೧೫ರಂದು 450 ಬಾಳೆಹಣ್ಣು ಖರೀದಿಸುವ ನೆಪದಲ್ಲಿ ರೂ.2 ಲಕ್ಷ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಈ ಕಳ್ಳತನ ಪ್ರಕರಣದ ಆರೋಪಿಗಳಿಬ್ಬರನ್ನು ಮಡಿಕೇರಿ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆತಂದು ತನಿಖೆ ನಡೆಸಿದ್ದಾರೆ.
ಬಾಡಿ ವಾರೆಂಟ್ ಮೂಲಕ ತನಿಖೆ: ಇಬ್ಬರು ಆರೋಪಿಗಳ ವಿಚಾರಣೆಗಾಗಿ ಮಡಿಕೇರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಒಂದು ದಿನದ ಬಾಡಿ ವಾರಂಟ್ ಮೂಲಕ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ತಂಡದವರು ಮಡಿಕೇರಿ ಜೈಲಿನಿಂದ ಆರೋಪಿಗಳಿಬ್ಬರಾದ ಹಾಸನ ಜಿಲ್ಲೆಯ ಮಹಮ್ಮದ್ ಇಕ್ಬಾಲ್(೫೬) ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಮಹಮ್ಮದ್ ಶಹಬಾದ(೨೫) ಎಂಬರನ್ನು ಡಿ.೩೦ ರಂದು ಕರೆತಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿ ನಂತರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಿ ಆರೋಪಿಗಳಿಂದ ೨೦ ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಇಬ್ಬರು ಆರೋಪಿಗಳನ್ನು ಡಿ.೩೧ ರಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ವಾಪಸ್ ಮಡಿಕೇರಿ ಜೈಲಿಗೆ ಕಳುಹಿಸಿದ್ದಾರೆ.
ಧರ್ಮಸ್ಥಳ ಪೊಲೀಸರ ಕೈಯಿಂದ ಜಸ್ಟ್ ಮಿಸ್: ಕೊಕ್ಕಡ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಸಿಸಿಕ್ಯಾಮರ ಹಾಗೂ ಟೆಕ್ನಿಕಲ್ ಆಧಾರದಲ್ಲಿ ಮಾಹಿತಿ ಕಲೆ ಹಾಕಿ ಧರ್ಮಸ್ಥಳ ಪೊಲೀಸರ ತಂಡ ಮಡಿಕೇರಿಗೆ ಹೋಗಿ ಕಾರ್ಯಾಚರಣೆ ಮಾಡುತ್ತಿರುವ ಕೆಲ ಗಂಟೆಗಳ ಮೊದಲು ಆರೋಪಿಗಳಿಬ್ಬರು ಮಡಿಕೇರಿ ಜಿಲ್ಲೆಯ ಸೋಮವಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿರುವಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಮಡಿಕೇರಿ ಜೈಲು ಪಾಲಾಗಿದ್ದರು.
ಮೂರು ಜಿಲ್ಲೆಯ ನಟೋರಿಯಸ್ ಕಳ್ಳರು: ಉಡುಪಿ, ದಕ್ಷಿಣ ಕನ್ನಡ, ಮಡಿಕೇರಿ ಜಿಲ್ಲೆಯಲ್ಲಿ ಮಹಮ್ಮದ್ ಇಕ್ಬಾಲ್ ವಿರುದ್ಧ ೮ ಪ್ರಕರಣ ಹಾಗೂ ಮಹಮ್ಮದ್ ಶಹಬಾದ ವಿರುದ್ಧ ೩ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಹಾಗೂ ತಂಡದವರು ಸಹಕರಿಸಿದ್ದಾರೆ.