ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜಿನಲ್ಲಿ ಅಡುಗೆ ತಿಳುವಳಿಕೆಯೊಂದಿಗೆ ನಿರೂಪಣಾ ಸಾಮರ್ಥ್ಯವೃದ್ಧಿಗಾಗಿ ಇರುವ ವಿಶೇಷ ಸ್ಪರ್ಧೆ- ಕಿಚನೋಮಿನಿಕ್ಸ್-2024ನ್ನು ಡಿ.31ರಂದು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿಯೇ ಇನ್‌ಸ್ಪೈರ್ ವಿದ್ವತ್ ವೇದಿಕೆಯಡಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ವೃತ್ತಿ ಕೌಶಲ್ಯ ಮತ್ತು ನಿರೂಪಣಾ ಸಾಮರ್ಥ್ಯ ವೃದ್ಧಿಗಾಗಿ ಪ್ರತಿವರ್ಷ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಲ್ಲಿ ಇದೂ ಒಂದು. ಮೊದಲನೆ ಬಾರಿಗೆ ಆಯೋಜಿಸಿರುವ ಹಾಗೂ ವಾಣಿಜ್ಯವಿಭಾಗದ ವಿದ್ಯಾರ್ಥಿಗಳಿಗಾಗಿಯೇ ಇರುವ ಈ ವಿಶೇಷ ಸ್ಪರ್ಧೆಯಲ್ಲಿ ನಾಲ್ಕು ತಂಡಗಳು ಭಾಗವಹಿಸಿ ಅವರ ಆಯ್ಕೆಯ ವಿಶೇಷ ರುಚಿ ತಯಾರಿಸಿ ಅದರಲ್ಲಿ ಉಪಯೋಗಿಸಿರುವ ಹಣ್ಣು, ತರಕಾರಿ, ಸಾಂಬಾರ ಪದಾರ್ಥಗಳ ಬಗೆಗಿನ ಸ್ಪಷ್ಟ ಮಾಹಿತಿ ನೀಡಿ, ಅವುಗಳ ಔಷಧ ಗುಣಗಳು, ಪ್ರೋಟೀನ್ ಹಾಗೂ ಇತರ ಗುಣಗಳ ಸವಿವರ ಮಾಹಿತಿ ನೀಡಿ ಆ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಾವ ರೀತಿ ಲಾಭ ಗಳಿಸಬಹುದೆಂಬುದರ ಬಗ್ಗೆ ತಮ್ಮಲ್ಲಿರುವ ನೈಪುಣ್ಯತೆಯನ್ನು ಪ್ರದರ್ಶಿಸಿದರು.
ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ತಾವು ತಯಾರಿಸಬೇಕಾದ ರುಚಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಮಕ್ಕಳು ತಮಗೆ ಒದಗಿಸಲಾದ ಮೇಜಿನ ಮೇಲೇಯೇ ಇಟ್ಟು, ಅಲ್ಲಿಯೇ ಸಿದ್ದಪಡಿಸಿ ಸುಮಾರು ೪೦ಕ್ಕೂ ಹೆಚ್ಚಿನ ಖಾದ್ಯಗಳನ್ನು ಸಿದ್ಧಪಡಿಸಿದರು. ಸುಮಾರು ನಾಲ್ಕು ತಂಡಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಗಮನ ಸೆಳೆವ ಪ್ರದರ್ಶನ ನೀಡಿದ ಬನ್ನಿ ತಿನ್ನಿ ರೆಸ್ಟೋರೆಂಟ್ ತಂಡ ಪ್ರಥಮ ಬಹುಮಾನ ಗಳಿಸಿತು.
ಉತ್ತಮ ಪೈಪೋಟಿ ನೀಡಿದ ಫ್ಲೇವರ್ ಪಾಲೆಟ್ ರೆಸ್ಟೋರೆಂಟ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸುಮಾರು 15 ದಿನಗಳ ಕಾಲ ತರಬೇತಿ ನೀಡಿ ಅಣಿಗೊಳಿಸಲಾಗಿದ್ದ ಈ ಸ್ಪರ್ಧೆಯ ನೇತೃತ್ವವನ್ನು ಆಂಗ್ಲ ಭಾಷಾ ಉಪನ್ಯಾಸಕರ ಆಶಿಕ್ ಬಾಲಚಂದ್ರ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ ಮಹಿತಾ ವಹಿಸಿದ್ದರು.
ಈ ಸ್ಪರ್ಧೆಯನ್ನು ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ ಮಂಡಗಳಲೆ ಉದ್ಘಾಟಿಸಿದರು.
ತೀರ್ಪುಗಾರರಾಗಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಅನಿಲ್ ಸುಸರಪು, ಸಸ್ಯಶಾಸ್ತ್ರದ ವಿಭಾಗದ ಉಪನ್ಯಾಸಕಿ ಶ್ರೀಮತಿ ಭಾಗ್ಯಲಕ್ಷ್ಮಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಕು. ಅನುಶ್ರೀ ಭಾಗವಹಿಸಿದ್ದರು.
ಪ್ರಾಂಶುಪಾಲಅರುಣ್ ಕ್ಯಾಸ್ಟಲಿನೊ ಉಪಸ್ಥಿತರಿದ್ದರು. ಉಪನ್ಯಾಸಕರಾದ ಆಶಿಕ್ ಬಾಲಚಂದ್ರ, ಶ್ರೀಮತಿ ಅನುಷ ಶೆಟ್ಟಿ. ಡಾ ಮಹಿತಾ ಕುಮಾರಿ, ನೀಲಕಂಠ ವಿವಿಧ ತಂಡಗಳ ಉಸ್ತುವಾರಿ ವಹಿಸಿದ್ದರು.