ಉಜಿರೆ: ಶ್ರೀ ಧ.ಮಂ. ಕಾಲೇಜು ರೋವರ್ಸ್ ಮತ್ತು ರೇಂಜರ್ಸ್ ಘಟಕ ಭಾರತ್ ಸೌಟ್ಸ್ ಮತ್ತು ಗೈಡ್ಸ್, ದ.ಕ ಜಿಲ್ಲೆ ಮತ್ತು ಬೆಳ್ತಂಗಡಿ ಸ್ಥಳೀಯ ಸಂಘಟನೆಗಳು ಪ್ರಸ್ತುತಪಡಿಸುವ ಪ್ರಮುಖ – 2K25 ಒಂದು ದಿನದ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಹಾಗೂ ಅಂತರ ಕಾಲೇಜು ಉತ್ಸವವು ಜ.6 ರಂದು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.
ಶ್ರೀ ಧ.ಮಂ. ಎಜ್ಯುಕೇಶನಲ್ ಸೊಸೈಟಿ ಸದಸ್ಯೆ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ರೋವರ್ಸ್ ಮತ್ತು ರೇಂಜರ್ಸ್ ಗೆ ಸೇರಿದ ವಿದ್ಯಾರ್ಥಿಗಳಿಗೆ ಸೇವೆಯನ್ನು ಮತ್ತು ಸಾಹಸ ಪ್ರವೃತ್ತಿಯನ್ನು ಅಳವಡಿಸಿಕೊಳ್ಳುವ ಹಾಗೂ ಗೌರವಿಸುವ ವ್ಯಕ್ತಿತ್ವ ಬೆಳೆಯುತ್ತದೆ. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ ಕೂಡ ಅಗತ್ಯ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮುಖ್ಯ ಅತಿಥಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಮತ್ತು ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಅಶ್ವಿತ್ ಜೈನ್ ಟ್ರೋಫಿ ಹಾಗೂ ಮಾಡೆಲ್ ಗಳ ಅನಾವರಣಗೊಳಿಸಿದರು.
ವೇದಿಕೆಯಲ್ಲಿ ಶ್ರೀ ಧ.ಮಂ. ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ರೋವರ್ಸ್ ಮತ್ತು ರೇಂಜರ್ಸ್ ನ ಜಿಲ್ಲಾ ಮುಖ್ಯಸ್ಥ ಮಹಮ್ಮದ್ ತುಂಬೆ, ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್ ಉಪಸ್ಥಿತರಿದ್ದರು.
ರೇಂಜರ್‌ಗಳು ಪ್ರಾರ್ಥಿಸಿದರು. ರೇಂಜರ್ ಲೀಡರ್ ಗಾನವಿ ಡಿ. ಸ್ವಾಗತಿಸಿದರು. ಭೂಮಿಕಾ ಕೆ. ಎಲ್ ಜೈನ್ ಮತ್ತು ಮಾನಸ ಅಗ್ನಿಹೋತ್ರಿ ನಿರೂಪಿಸಿದರು. ರೋವರ್ ಸೈಟ್ಸ್ ಲೀಡರ್ ಪ್ರಸಾದ್ ಕುಮಾರ್ ವಂದಿಸಿದರು.