ಪೆರಾಡಿ: ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಒಂದಾದ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಉತ್ತಮ ಕರ್ತವ್ಯ ನಿರ್ವಾಹಕರಾದ ಯು. ಶೇಖ್ ಲತೀಫ್ ಇವರು ಕಳೆದ ಡಿಸೆಂಬರ್ 31ರಂದು ಸೇವಾ ನಿವೃತ್ತಿ ಹೊಂದಿದರು.
ಸಂಘದ ಆಡಳಿತ ಮಂಡಳಿಯ ಮಾತ್ರವಲ್ಲ, ಸದಸ್ಯರ ಹಾಗೂ ಗ್ರಾಹಕರ ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾಗಿದ್ದ ಯು. ಶೇಖ್ ಲತೀಫ್ ಅವರು ಆರಂಭದಲ್ಲಿ ಸಂಘದ ಪೆರಿಂಜೆ ಶಾಖೆಯ ಶಾಖಾಧಿಕಾರಿ ಸಹಕಾರಿ ಸೇವೆಯ ಮೂಲಕ ಕರ್ತವ್ಯ ಆರಂಭಿಸಿದರು. ಬಳಿಕ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪೆರಾಡಿಯ ಕೇಂದ್ರ ಕಛೇರಿಯಲ್ಲಿ ಶಾಖಾಧಿಕಾರಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಬಳಿಕ ಪದೋನ್ನತಿ ಹೊಂದಿ ಕಳೆದ 6 ವರ್ಷಗಳಿಂದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಯಶಸ್ವಿಯಾಗಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಎಲ್ಲ ಸಿಬ್ಬಂದಿಗಳ ಸಹಕಾರದಿಂದ ಆಡಳಿತ ಮಂಡಳಿಯ ನಿರ್ಣಯಗಳನ್ನು ಮತ್ತು ಸಹಕಾರಿ ಸಂಘದ ಸುತ್ತೋಲೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದ ಶೇಖ್ ಲತೀಫ್ ತನ್ನ ಸೇವಾವಧಿಯುದ್ದಕ್ಕೂ ಆಡಳಿತ ಮಂಡಳಿಯ, ಸರ್ವಸದಸ್ಯರ, ಗ್ರಾಹಕರ ಮತ್ತು ಸಿಬ್ಬಂದಿವರ್ಗದ ವಿಶ್ವಾಸ ಉಳಿಸಿಕೊಂಡಿದ್ದರು. ಉತ್ತಮ ಸಂಘಟಕರಾಗಿರುವ ಯು. ಶೇಖ್ ಲತೀಫ್ ಅವರು ಅನೇಕ ವರ್ಷಗಳ ಕಾಲ ಬೆಳ್ತಂಗಡಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ಅಧ್ಯಕ್ಷರಾಗಿಯೂ ಯಶಸ್ಸನ್ನು ಕಂಡಿದ್ದರು. ಅಂತೆಯೇ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಮೃತ ಮಹೋತ್ಸವ ಸಂದರ್ಭ ಮಂಗಳೂರಿನಲ್ಲಿ ನಡೆದ ಸಹಕಾರಿಗಳ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಉತ್ತಮ ಬೌಲರ್ ಪ್ರಶಸ್ತಿಯಿಂದ ಪುರಸ್ಕೃತರಾಗಿರುವುದು ಶೇಖ್ ಲತೀಫರ ಬಹುಮುಖ ಪ್ರತಿಭೆಗೆ ಒಂದು ಸಣ್ಣ ಸಾಕ್ಷಿ