ಮಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದ.ಕ. ಜಿಲ್ಲೆಯ ವಿವಿಧ ಮಸೀದಿಗಳಿಗೆ ಮಂಜೂರಾದ ಮೃತದೇಹ ಸಂರಕ್ಷಣಾ ಫ್ರೀಝರ್ ಬಾಕ್ಸ್‌ಗಳನ್ನು ಇತ್ತೀಚೆಗೆ ಆಯಾ ಜಮಾಅತ್ ಗಳಿಗೆ ಹಸ್ತಾಂತರಿಸಲಾಯಿತು.
ದ.ಕ. ಜಿಲ್ಲಾ ವಕ್ಫ್ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಡಾ. ಎ.ಕೆ ಜಮಾಲ್ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಮಾತನಾಡಿದ ಅವರು, ಅಲ್ಪಸಂಖ್ಯಾತ ಇಲಾಖೆ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಮತ್ತು ರಾಜ್ಯ ವಕ್ಫ್ ಸಮಿತಿ ಅಧ್ಯಕ್ಷ ಅನ್ವರ್ ಬಾಷಾ ಅವರ ಮುತುವರ್ಜಿಯಿಂದಾಗಿ ಈ ಮೃತದೇಹಗಳ ಸಂರಕ್ಷಣೆಗೆ ಅಗತ್ಯದ ಫ್ರೀಜರ್ ಬಾಕ್ಸ್‌ಗಳು ನಮ್ಮ ಜಿಲ್ಲೆಯ ಮಸೀದಿಗಳಿಗೂ ಸಿಗುವಂತಾಗಿದೆ. ಅಂತೆಯೇ ಜಮಾಅತ್ ಗಳಿಗೆ ಮೂಲಭೂತವಾದ ಇನ್ನಷ್ಟು ಸೌಕರ್ಯಗಳನ್ನು ಒದಗಿಸಿಕೊಡುವುದು ವಕ್ಫ್ ಮಂಡಳಿಯ ಜವಾಬ್ದಾರಿಯೂ ಆಗಿದೆ. ಸರಕಾರದಿಂದ ಪಡೆದ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಅರ್ಹರಿಗೆ ಇದರ ಪ್ರಯೋಜನ ಲಭಿಸುವಂತಾಗಬೇಕು ಎಂದರು.
ಮಂಗಳೂರು ಝೀನತ್ ಬಕ್ಸ್ ಜುಮಾ ಮಸೀದಿ ಬಂದರ್, ಜುಮಾ ಮಸ್ಜಿದ್ ಮತ್ತು ಹಝ್ರತ್ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಉಳ್ಳಾಲ, ಬದ್ರಿಯಾ ಜುಮಾ ಮಸ್ಜಿದ್ 7ನೇ ಬ್ಲಾಕ್ ಕೃಷ್ಣಾಪುರ, ಮೊಹಿದ್ದೀನ್ ಜುಮಾ ಮಸ್ಜಿದ್ ಗಾಂಧಿನಗರ, ರಹ್ಮಾನಿಯಾ ಮಸ್ಜಿದ್ ಮತ್ತು ದರ್ಗಾ ಸಮಿತಿ ಕಾಜೂರು, ಬದ್ರಿಯಾ ಜುಮಾ ಮಸ್ಜಿದ್ ಮೂಡಬಿದಿರೆ ಮತ್ತು ಮೊಹಿಯುದ್ದೀನ್ ಜುಮಾ ಮಸ್ಜಿದ್ ಮಿತ್ತಬೈಲ್ ಇವಿಷ್ಟು ಜಮಾಅತ್ ಗಳಿಗೆ ಮೊದಲ ಹಂತದಲ್ಲಿ ಫ್ರೀಜರ್‌ಗಳನ್ನು ವಿತರಿಸಲಾಯಿತು.
ಈ ಸಮಾರಂಭದಲ್ಲಿ ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಜೆ.ಹೆಚ್ ಅಬೂಬಕರ್ ಸಿದ್ದೀಕ್ ಕಾಜೂರು, ಸಿರಾಜುದ್ದೀನ್, ಹನೀಫ್ ಮಲ್ಲೂರು, ಸುಳ್ಯ ಜಮಾಅತ್ ಅಧ್ಯಕ್ಷ ಕೆ ಎಮ್ ಮುಸ್ತಫಾ , ಮಿತ್ತಬೈಲ್ ಜಮಾಅತ್‌ನ ಅಧ್ಯಕ್ಷ ಮುಹಮ್ಮದ್, ಕಿಲ್ಲೂರು ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಮಾತನಾಡಿದರು.
ಅಭಿನಂದನೆ; ಕರ್ನಾಟಕ ಮಾಧ್ಯಮ ಅಕಾಡೆಮಿಯ 2023 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಅಯ್ಕೆಯಾಗಿರುವ ವಾರ್ತಾಭಾರತಿ ಮಂಗಳೂರು ಬ್ಯುರೋದ ಹಿರಿಯ ವರದಿಗಾರ ಇಬ್ರಾಹಿಂ ಅಡ್ಕಸ್ಥಳ ಇವರನ್ನು ಜಿಲ್ಲಾ ವಕ್ಪ್ ಸಲಹಾ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ಸುಳ್ಯ ಪಟ್ಟಣ ಪಂಚಾಯತ್ ಸದಸ್ಯ ಉಮರ್, ಮೂಡಬಿದಿರೆ ಜಮಾಅತ್ ಅಧ್ಯಕ್ಷ ಅಬೂಬಕರ್, ಅಝೀಝ್ ಬೈಕಂಪಾಡಿ ಉಪಸ್ಥಿತರಿದ್ದರು.
ಜಿಲ್ಲಾ ವಕ್ಫ್ ಅಧಿಕಾರಿ ಎಂ. ಅಬೂಬಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಲಹಾ ಸಮಿತಿ ಸದಸ್ಯ ಸೈದುದ್ದೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.