ಉಜಿರೆ: ಇಲ್ಲಿನ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್‌ದಳದಿಂದ ರಾಷ್ಟ್ರೀಯ ಯುವ ದಿನವನ್ನು ಮೂಡುಬಿದಿರೆಯ ಕೋನಾಜೆ ಕಲ್ಲಿಗೆ ಚಾರಣಗೈಯುವ ಮೂಲಕ ವಿನೂತನವಾಗಿ ಆಚರಿಸಲಾಯಿತು.
ಮೂಡುಬಿದಿರೆಯ ಕೋನಾಜೆ ಕಲ್ಲು ಒಂದು ಐತಿಹಾಸಿಕ ಮತ್ತು ಪೌರಾಣಿಕ ಪ್ರಸಿದ್ಧ ಜನಪ್ರಿಯ ಚಾರಣವಾಗಿದೆ.ಈ ಐತಿಹಾಸಿಕ ಸ್ಥಳಕ್ಕೆ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಚಾರಣಗೈಯುವುದರ ಜೊತೆಗೆ ಚಾರಣಿಗರಿಂದ ಎಸೆಯಲ್ಪಟ್ಟ ಕುಡಿದ ನೀರಿನ ಬಾಟಲಿ, ಪ್ಲಾಸ್ಟಿಕ್ ಕವರ್ ಗಳು ಹಾಗೂ ಇನ್ನಿತರ ಪರಿಸರ ಮಾರಕ ವಸ್ತುಗಳನ್ನು ಸ್ವಚ್ಚಗೊಳಿಸುತ್ತ ಅಲ್ಲಿನ ಇತರ ಚಾರಣಿಗರಿಗೂ ಸ್ವಚ್ಚ ಪರಿಸರದ ಬಗ್ಗೆ ಅರಿವು ಮೂಡಿಸಿ ತಾವು ಸಂಗ್ರಹಿಸಿದ ನೀರಿನ ಬಾಟಲಿ, ಪ್ಲಾಸ್ಟಿಕ್ ಕವರ್ಗಳನ್ನು ಸೂಕ್ತ ವಿಲೇವಾರಿಗಾಗಿ ಅಲ್ಲಿನ ಶ್ರೀ ಸಿದ್ಧಾರೂಢ ಆಶ್ರಮಕ್ಕೆ ಹಸ್ತಾಂತರಿಸಿದರು.
ರಾಷ್ಟ್ರೀಯ ಯುವ ದಿನಾಚರಣೆ:
ಇದೆ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಆಚರಿಸಲ್ಪಡುವ ರಾಷ್ಟ್ರೀಯ ಯುವ ದಿನಾಚರಣೆಯನ್ನೂ ಸರಳವಾಗಿ ಆಚರಿಸಲಾಯಿತು.ಚಾರಣದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಅರ್ಥಶಾಸ್ತ ಉಪನ್ಯಾಸಕ ಶ್ರೀ ರಾಜು ಎ ಎ ಸ್ವಾಮಿ ವಿವೇಕಾನಂದರ ಜೀವನಶೈಲಿ,ಅವರ ವಿಚಾರಧಾರೆ, ಅವರಿಂದ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇ ಬೇಕಾದ ಅಂಶಗಳ ಬಗ್ಗೆ ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರಮೊದ್ ಕುಮಾರ್ ಬಿ ವಿದ್ಯಾರ್ಥಿಗಳ ಚಾರಣ ಹಾಗೂ ಸ್ವಚ್ಚತಾಂದೋಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿವೇಕಾನಂದರಂತೆ ನಿಮ್ಮಲ್ಲೂ ಉತ್ಕಟ ದೇಶಪ್ರೇಮ, ಸಮಾಜಸೇವಾ ಮನೋಭಾವ ನಿರಂತರವಾಗಿ ಪ್ರವಹಿಸಲಿ ಎಂದು ಶುಭಹಾರೈಸಿದ್ದರು.
30 ರೋವರ್ಸ್ ಮತ್ತು 16 ರೇಂಜರ್ಸ್ ಸೇರಿ ಒಟ್ಟೂ 46 ವಿದ್ಯಾರ್ಥಿಗಳು ಈ ಚಾರಣದಲ್ಲಿ ಪಾಲ್ಗೊಂಡಿದ್ದರು.ಇವರ ಈ ಚಾರಣ ಮತ್ತು ಸ್ವಚ್ಚತಾಂದೋಲನಕ್ಕೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳದ ಅಧಿಕಾರಿಗಳಾದ ಲಕ್ಷ್ಮೀಶ್ ಭಟ್ ಮತ್ತು ಅಂಕಿತಾ ಎಂ ಕೆ ಮಾರ್ಗದರ್ಶನ ನೀಡಿದರು.