ಉಜಿರೆ: ವಿದ್ಯಾರ್ಥಿಯಾದವನು ಓದು , ಮನನ ಹಾಗೂ ಪುನರ್ಮನನಗಳ ಮೂಲಕ ಕಲಿಯಬೇಕು. ಚಿತ್ರಗಳನ್ನು ಕಲ್ಪಿಸಿ ಓದುವುದು , ಕೇಳಿ ಹಾಗೂ ನೋಡಿ ಕಲಿಯುವುದು , ಬರೆದು ಕಲಿಯುವುದು , ವೈಯಕ್ತಿಕ ಮನನ ಮಾಡಿ ಕಲಿಯುವುದು ಹೀಗೆ ವಿವಿಧ ಪ್ರಕಾರಗಳಲ್ಲಿ ಕಲಿಯುವಿಕೆ ಸಾಧ್ಯ.
ಹೆಚ್ಚಿನ ವಿಷಯಗಳನ್ನು ನಮ್ಮ ಮಾತೃ ಭಾಷೆಯಲ್ಲಿ ಕಲಿಯುವುದು ಹೆಚ್ಚು ರೂಢಿ ಮಾಡಿಕೊಂಡರೆ ಕಲಿಯಲು ಹಾಗೂ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಓದಿಕೊಳ್ಳುವ ಸಂದರ್ಭದಲ್ಲಿ ಬೆಳಕು , ಗಾಳಿ ಇತ್ಯಾದಿ ಪೂರಕ ವ್ಯವಸ್ಥೆ ಚೆನ್ನಾಗಿರಬೇಕು. ತುಂಬಾ ಶ್ರಮಪಟ್ಟು ಓದುವಿಕೆಗಿಂತ ಹೆಚ್ಚಾಗಿ ಬುದ್ದಿವಂತಿಕೆ ಹಾಗೂ ಕಾರ್ಯತಂತ್ರದ ಮೂಲಕ ಓದುವುದು ಸೂಕ್ತವೆಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ವತಿಯಿಂದ ನಡೆದ ಪರೀಕ್ಷಾ ತಯಾರಿಯ ಧನಾತ್ಮಕ ಮಾರ್ಗಗಳ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಪ್ರಶಿಕ್ಷಣ ನೀಡಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ ಸ್ಮರಣಿಕೆ ನೀಡಿ ಗೌರವಿಸಿದರು.
ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಂಯೋಜಕ ರಜತ್ ಪಡ್ಕೆ ನಿರೂಪಿಸಿ, ಸಹ ಸಂಯೋಜಕಿ ಗೌತಮಿ ಜಿ. ವಂದಿಸಿದರು.