ಉಜಿರೆ: ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ದಿನೇ ದಿನೇ ಹಲವಾರು ಬದಲಾವಣೆ, ಹೊಸ ಹೊಸ ಅವಿಷ್ಕಾರಗಳು,ಸಂಶೋಧನೆಗಳು ನಡೆಯುತ್ತಿದೆ. ಡಾ.ಗೋಪಾಲಕೃಷ್ಣ ದಂಪತಿ ಹಾಗೂ ಕುಟುಂಬದ ಸದಸ್ಯರು ಗ್ರಾಮೀಣ ಭಾಗದ ಜನರಿಗೆ ಅತ್ಯುತ್ತಮ ದರ್ಜೆಯ ಆರೋಗ್ಯ ಸೇವೆ ನೀಡುತ್ತಿರುವುದು ಶ್ಲಾಘನೀಯವಾದುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ಜ. 18 ರಂದು ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ಹಾಗೂ ನೂತನ ವಿಸ್ತೃತ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಡೇ-ಕೇರ್ ವಿಭಾಗದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇರವೇರಿಸಿ ಮಾತನಾಡಿ ಆಸ್ಪತ್ರೆಗೆ ಬರುವ ರೋಗಿಗಳನ್ನು ತನ್ನ ಕುಟುಂಬದ ಸದಸ್ಯರ ರೀತಿ ಆರೈಕೆ ಮಾಡುವ ಡಾ.ಗೋಪಾಲಕೃಷ್ಣ ದಂಪತಿ ಸಮಾಜಕ್ಕೆ ಪ್ರೇರಣೆ.ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಬೆನಕ ಆಸ್ಪತ್ರೆ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವುದು ಸಂತಸದ ವಿಚಾರ ಎಂದರು.
ಬೆನಕ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಗೋಪಾಲಕೃಷ್ಣ ಅವರ ತಂದೆ ಸೀತಾರಾಮ ಭಟ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾಕಿರಣ್ ಕಾರಂತ ,ಉಪಾಧ್ಯಕ್ಷ ರವಿಕುಮಾರ್ ಬರೆಮೇಲು,ರಾಷ್ಟ್ರೀಯ ಆರೋಗ್ಯ ಸಂಸ್ಥೆ ರಾಜ್ಯ ನಿರ್ದೇಶಕ ಡಾ.ನವೀನ್ ಭಟ್, ಡಾ.ನಿಮಿಷಾ ಭಟ್ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿ ಶುಭ ಕೋರಿದರು.
ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಡಾ. ಜಿ.ಕೆ, ಡಾ.ಆದಿತ್ಯ ರಾವ್, ಡಾ.ಅಂಕಿತಾ ಜಿ ಭಟ್, ಡಾ.ರೋಹಿತ್ ಜಿ ಭಟ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಹಿರಿಯ ನ್ಯಾಯವಾದಿ ಧನಂಜಯ ರಾವ್ ಮತ್ತು ಬೆನಕ ಪಬ್ಲಿಕ್ ರಿಲೇಶನ್ ಆಫೀಸರ್ ಎಸ್ .ಜಿ ಭಟ್ ಕಾರ್ಯಕ್ರಮ ನಿರ್ವಹಿಸಿದರು.