![](https://suddiudaya.com/wp-content/uploads/2025/02/maladi2-copy.jpg)
ರಾತ್ರಿ ಮನೆಯ ಎದುರು ಸೇರಿದ ಸ್ಥಳೀಯರು
ಮಾಲಾಡಿ: ಸಂಜೆಯಾಗಿ ಕತ್ತಲು ಆವರಿಸುತ್ತಿದ್ದಂತೆ, ಮನೆಯೊಳಗೆ ಇರುವ ಬಟ್ಟೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆ, ಊಟದ ಬಟ್ಟಲು, ತಟ್ಟೆಗಳನ್ನು ಎಸೆಯುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸುವುದು, ಗಂಧ-ಪ್ರಸಾದ ಮಾಯಾ ಆಗುವುದು, ಮನೆಯ ಲೈಟ್ ಆಫ್-ಆನ್ ಆಗುವುದು ಮೊದಲಾದ ವಿಚಿತ್ರ ಘಟನೆಗಳು ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿಯ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ನಡೆಯುತ್ತಿದ್ದು, ಪ್ರತಿದಿನ ರಾತ್ರಿ ನೂರಾರು ಮಂದಿ ಕುತೂಹಲಿಗರು ಈ ಘಟನೆಯನ್ನು ವೀಕ್ಷಿಸಲು ಮನೆಯ ಮುಂದೆ ಜಮಾಯಿಸುತ್ತಿದ್ದಾರೆ.
ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿ ಉಮೇಶ್ ಶೆಟ್ಟಿ ತಮ್ಮ ಪತ್ನಿ ಶ್ರೀಮತಿ ವಿನೋದ ಪುತ್ರಿಯರಾದ ನಿಖಿತಾ ಹಾಗೂ ರಕ್ಷಿತಾ ಜೊತೆ ವಾಸ್ತವ್ಯವಿದ್ದಾರೆ. ನಿಖಿತಾ ದ್ವಿತೀಯ ಪಿಯುಸಿಯಲ್ಲಿ ಹಾಗೂ ರಕ್ಷಿತಾ 8ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಉಮೇಶ್ ಶೆಟ್ಟಿ ಅವರದ್ದು ಬಡ ಕುಟುಂಬ ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡವರು. ಉಮೇಶ್ ಶೆಟ್ಟಿಯವರು ಸೆಂಟ್ರಿಂಗ್ ಕೆಲಸಕ್ಕೆ ಹೋಗಿ ತಮ್ಮ ಕುಟುಂಬದ ಜೀವನ ನಿರ್ವಹಿಸುತ್ತಿದ್ದಾರೆ.
![](https://suddiudaya.com/wp-content/uploads/2025/02/maladi-copy.jpg)
ಇವರ ಮನೆಯಲ್ಲಿ ಕಳೆದ ಮೂರು ತಿಂಗಳಿಂದ ಈ ಪವಾಡಗಳು ನಡೆಯುತ್ತಿದೆ. ಮನೆಯಲ್ಲಿ ಸಂಜೆ 5 ಗಂಟೆಯ ಬಳಿಕ ಕತ್ತಲಾಗುತ್ತಿದ್ದಂತೆ ಪ್ರೇತ ಹಾಗೂ ದೈವದ ಕಾಟ ಆರಂಭವಾಗುತ್ತದೆ. ಮನೆಯಲ್ಲಿರುವ ಬಟ್ಟೆಗೆ ಬೆಂಕಿ ಹತ್ತಿಕೊಳ್ಳುವುದು, ಅಡಿಗೆ ಮನೆ ಹಾಗೂ ಮನೆಯಲ್ಲಿರುವ ಪಾತ್ರೆ, ಬಟ್ಟಲು ಲೋಟ, ಚೊಂಬು, ಸೇರಿದಂತೆ ವಸ್ತುಗಳನ್ನು ಎಸೆಯುವುದು, ಮನೆಯ ವಿದ್ಯುತ್ ಲೈಟ್‌ಗಳು ಒಮ್ಮೆಮ್ಮೆ ಆನ್, ಆಫ್ ಆಗುವುದು, ಮನೆಯ ಒಳಗಿದ್ದ ವಸ್ತುಗಳು ಚಲಿಸುವುದು ಮೊದಲಾದ ವಿಚಿತ್ರಕಾರಿ ಘಟನೆಗಳು ಸಂಭವಿಸುತ್ತಿದ್ದು, ಇದು ಮನೆಯಲ್ಲಿದ್ದವರ ಕಣ್ಣೇದುರಿಗೆ ನಡೆಯುತ್ತಿದೆ.
![](https://suddiudaya.com/wp-content/uploads/2025/02/maladi5.jpg)
ಒಮ್ಮೆಮ್ಮೆ ಉಮೇಶ್ ಶೆಟ್ಟಿಯವರ ಪತ್ನಿ ವಿನೋದ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದಂತೆ ಆಗಿ, ಅವರಿಗೆ ಉಸಿರುಕಟ್ಟುವ ತನಕ ಉಂಟಾಗಿ ಮನೆಯವರಿಗೆ ಆತಂಕ ಸೃಷಿಸುತ್ತಿದೆ. ಮನೆಯಲ್ಲಿ ನಡೆಯುವ ವಿಚಿತ್ರ ಘಟನೆಗಳ ಬಗ್ಗೆ ಭಯಭೀತರಾದ ಉಮೇಶ್ ಶೆಟ್ಟಿಯವರು ಹಲವಾರು ಜ್ಯೋತಿಷಿಗಳ ಬಳಿಗೆ ಹೋಗಿ ಪ್ರಶ್ನಾಚಿಂತನೆ ನಡೆಸಿದ್ದಾರೆ. ಜ್ಯೋತಿಷಿಗಳು ಪ್ರಸಾದ ಕೊಟ್ಟರೆ ಅದು ಮನೆಗೆ ತಂದು ಇಟ್ಟಾಗ ಮಾಯಾ ಆಗುತ್ತಿದೆ. ಪತ್ನಿ, ಮಕ್ಕಳಿಗೆ ನೂಲು ಕಟ್ಟಿದರೆ ಅದು ಕೂಡಾ ಮಾಯಾವಾಗುತ್ತಿದೆ, ಧರಿಸಿದ ಬಂಗಾರ, ಮನೆಯಲ್ಲಿದ್ದ ಬಂಗಾರವೂ ಮಾಯಾವಾಗಿದೆ ಎಂದು ಉಮೇಶ್ ಶೆಟ್ಟಿ ಅವರು ಸುದ್ದಿ ಉದಯ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಮೊಬೈಲ್‌ನಲ್ಲಿ ದಾಖಲಾದ ಪ್ರೇತದ ತಲೆ ಚಿತ್ರ: ಮನೆಯಲ್ಲಿ ಉಮೇಶ್ ಶೆಟ್ಟಿಯವರ ಸಣ್ಣ ಮಗಳು ರಕ್ಷಿತಾಗೆ ಮನೆಯಲ್ಲಿ ನಡೆಯುವ ಈ ವಿಚಿತ್ರ ಘಟನೆಗಳು ಕಣ್ಣಿಗೆ ಗೋಚರಿಸುತ್ತಿವೆಯಂತೆ, ಮನೆಯಲ್ಲಿ ಓದಲು ಕುಳಿತರೆ ಅವಳಿಗೆ ಪ್ರೇತದಂತೆ ಚಲಿಸುವುದು ಕಣ್ಣಿಗೆ ಕಾಣುತ್ತದೆ. ಒಂದು ದಿನ ಆಕೆ ತನ್ನ ಮೊಬೈಲ್‌ನಲ್ಲಿ ಅದನ್ನು ಪೋಟೋ ತೆಗೆದಿದ್ದು, ಪೋಟೋ ಮಸ್ಕ್ಆಗಿ ಬಂದಿದೆ. ಪೋಟೋದಲ್ಲಿ ಗಂಡು ಅಥವಾ ಹೆಣ್ಣು ಎಂದು ಗುರುತಿಸಲಾಗದಂತೆ, ಸತ್ತವರು ಮಲಗಿದಂತೆ ತಲೆ ಮಾತ್ರ ಕಂಡು ಬಂದಿದ್ದು, ಉಳಿದ ಭಾಗ ಕತ್ತಲು ಆವರಿಸಿದಂತೆ ಕಂಡು ಬಂದಿದೆ ಎಂದು ಉಮೇಶ್ ಶೆಟ್ಟಿ ಹೇಳುತ್ತಾರೆ. ಈ ಪೊಟೋಗಳು ಸ್ಥಳೀಯ ಪರಿಸರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
![](https://suddiudaya.com/wp-content/uploads/2025/02/maladi3-copy.jpg)
ಬಟ್ಟಲಲ್ಲಿ ತಿರುಗಿದ ನಿಂಬೆ ಹಣ್ಣು:
ಮನೆಯಲ್ಲಿ ಪ್ರೇತ ಭಾದೆ ಮತ್ತು ದೈವ ಭಾದೆ ಇದೆಯೇ ಎಂದು ನೋಡಲು ಜ್ಯೋತಿಷಿಯೊಬ್ಬರ ಸಲಹೆಯಂತೆ ರಾತ್ರಿ ಮನೆಯಲ್ಲಿ ನೆಲದಲ್ಲಿ ಬಟ್ಟಲಲ್ಲಿ ನಿಂಬೆ ಹಣ್ಣು ಇಟ್ಟು ಅದರ ಸುತ್ತ ಬಿಳಿ ಬಣ್ಣದ ಪೌಡರ್‌ನ್ನು ಚೆಲ್ಲಿದ್ದರು. ಬಟ್ಟಲಲ್ಲಿ ಇಟ್ಟ ನಿಂಬೆ ಹಣ್ಣು ರಾತ್ರಿ ಜೋರಾಗಿ ತಿರುಗುತ್ತಿತ್ತಂತೆ, ಬಟ್ಟಲಿನ ಸುತ್ತ ಹಾಕಿದ ಪೌಡರನ್ನು ಬೆಳಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮನುಷ್ಯನ ಪಾದದ ಅಚ್ಚು ಉಲ್ಟವಾಗಿ ಅದರಲ್ಲಿ ಕಂಡು ಬಂದಿತ್ತಂತೆ. ಕಳೆದ ಎರಡು ದಿನಗಳ ಹಿಂದೆ ದೇವಸ್ಥಾನದಿಂದ ಎರಡು ಬಾಟಲಿ ತೀರ್ಥವನ್ನು ಮನೆಗೆ ತಂದಿದ್ದರು. ಒಂದು ಬಾಟಲಿಯ ತೀರ್ಥ ಮನೆಗೆ ಬರುವಾಗ ಪೂರ್ತಿ ಖಾಲಿಯಾಗಿತ್ತು. ಇನ್ನೊಂದು ಬಾಟಲಿಯಲ್ಲಿ ಅರ್ಧ ತೀರ್ಥ ಇತ್ತು. ಸಂಜೆಯಾಗುವ ಹೊತ್ತಿಗೆ ಅದು ಪೂರ್ತಿ ಖಾಲಿಯಾಗಿ ಖಾಲಿ ಬಾಟಲಿ ಇತ್ತಂತೆ. ದೇವರ ಪ್ರಸಾದ ತಂದಿಟ್ಟರೆ ಅದು ಮಾಯಾವಾಗುತ್ತಿದೆಯಂತೆ.
ಸ್ಕೂಟಿಯಲ್ಲಿ ಕಂಡು ಬರುವ ಪ್ರಸಾದ: ಉಮೇಶ್ ಶೆಟ್ಟಿಯವರು ಸ್ಕೂಟಿಯೊಂದನ್ನು ಹೊಂದಿದ್ದಾರೆ. ಕೆಲ ಸಮಯಗಳಿಂದ ಬೆಳಿಗ್ಗೆ ನೋಡುವಾಗ ಇವರ ಸ್ಕೂಟಿಯಲ್ಲಿ ಪ್ರಸಾದ ಕಂಡು ಬರುತ್ತಿದೆ. ಇದನ್ನು ಯಾರು ತಂದು ಇಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಉಮೇಶ್ ಶೆಟ್ಟಿಯವರು. ಯಾರೋ ಅನಾಮಧೇಯ ವ್ಯಕ್ತಿಗಳು ಈ ಕೃತ್ಯವನ್ನು ಎಸಗುತ್ತಿದ್ದಾರೆ. ಮನೆಯ ಬಳಿ ನಿಲ್ಲಿಸಿದ್ದರೆ ಬೆಳಿಗ್ಗೆ ಅದರಲ್ಲಿ ಪ್ರಸಾದ ಕಂಡು ಬರುತ್ತದೆ. ಒಮ್ಮೆ ಸ್ಕೂಟಿಯಲ್ಲಿ ಯಾರು ಪ್ರಸಾದ ಇಡುವುದು ಎಂದು ನೋಡಬೇಕು ಎಂದು ಕಾದು ಕುಳಿತ್ತಿದ್ದರು ಆದರೆ ಆ ದಿನ ಪ್ರಸಾದ ಇರಲಿಲ್ಲ, ಆದರೆ ಸ್ಕೂಟಿನಲ್ಲಿ ಬೇರೆ ಕೆಲಸಕ್ಕೆ ಹೋಗಿ ಅಲ್ಲಿ ಸ್ಕೂಟಿ ಇಟ್ಟು ಕೆಲಸ ಮುಗಿಸಿ ಬರುವಾಗ ಸ್ಕೂಟಿಯಲ್ಲಿ ಪ್ರಸಾದ ಕಂಡು ಬಂದಿದೆ. ಇದೊಂದು ವಿಚಿತ್ರವಾಗಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ದೈವ ಪ್ರೇತದ ಭಾದೆ: ಬಡವರಾದ ಉಮೇಶ್ ಶೆಟ್ಟಿಯವರ ಮನೆಯಲ್ಲಿ ಕಂಡು ಬರುತ್ತಿರುವ ಈ ವಿಚಿತ್ರ ಘಟನೆಗಳನ್ನು ನೋಡಲು ಪ್ರತಿದಿನ ನೂರಾರು ಮಂದಿ ಅವರ ಮನೆಗೆ ಬರುತ್ತಾರೆ. ಕೆಲ ಮಂದಿ ಮನೆಯ ಲೈಟನ್ನು ಆಫ್ ಮಾಡಿ ಮನೆಯೊಳಗೆ ಕತ್ತಲಲ್ಲಿ ಕಾದು ಕುಳಿತು ಏನಾದರೂ ಘಟನೆ ನಡೆಯುತ್ತದೋ ಎಂದು ಪರಿಶೀಲನೆ ನಡೆಸಿದ್ದಾರೆ. ಈ ರೀತಿ ಮಾಡಿದಾಗ ಯಾವುದೇ ಘಟನೆ ಅರಿವಿಗೆ ಬಂದಿಲ್ಲ. ಹತ್ತಿರದ ಮನೆಯವರು ಲೋಟ, ಪಾತ್ರೆ ಬೀಳುವುದನ್ನು ಕಂಡಿದ್ದೇವೆ ಎನ್ನುತ್ತಾರೆ. ಜ್ಯೋತಿಷಿಗಳಲ್ಲಿ ಕೇಳಿದಾಗ ಇದು ಪ್ರೇತ ಮತ್ತು ಮಂತ್ರದೇವತೆ ದೈವದ ಭಾದೆ. ದೈವವನ್ನು ನಂಬಬೇಕು, ಪ್ರೇತವನ್ನು ಉಚ್ಚಾಟಿಸಬೇಕು ಎಂದು ಸಲಹೆ ನೀಡಿದರಂತೆ. ಉಮೇಶ್ ಶೆಟ್ಟಿಯವರ ಮನೆಯಲ್ಲಿ ಕಳೆದ ಮೂರು ತಿಂಗಳಿಂದ ಈ ವಿಚಿತ್ರ ಘಟನೆ ಸ್ಥಳೀಯ ಜನರಲ್ಲಿ ಬಹಳಷ್ಟು ಕುತೂಹಲ ಕೆರಳಿಸಿದೆ. ದೆವ್ವ, ಭೂತ, ಪ್ರೇತಗಳನ್ನು ನಂಬುವವರು ಇದ್ದಾರೆ, ನಂಬದವರು ಇದ್ದಾರೆ. ಒಟ್ಟಿನಲ್ಲಿ ಉಮೇಶ್ ಶೆಟ್ಟಿಯವರಿಗೆ ಈ ಘಟನೆಗಳು ಆತಂಕ ಹಾಗೂ ಭೀತಿಯನ್ನು ಸೃಷ್ಟಿಸಿದೆ.