ಬೆಳ್ತಂಗಡಿ: ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ ಫೆ.10ರಿಂದ ಆರಂಭಗೊಂಡಿದ್ದು, ಬೆಳ್ತಂಗಡಿ ತಾಲೂಕು ಆಡಳಿತಾಧಿಕಾರಿಗಳು ಬೆಳ್ತಂಗಡಿ ಆಡಳಿತ ಸೌಧದ ಎದರು ಧರಣಿ ನಡೆಸುತ್ತಿದ್ದು, ತಾಲೂಕಿನಲ್ಲಿ ಕಂದಾಯ ಇಲಾಖೆಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಕಳೆದ ಸಪ್ಟಂಬರ್ ತಿಂಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ರಾಜ್ಯ ವ್ಯಾಪ್ತಿ ಮುಸ್ಕರ ನಡೆಸಿದ್ದು, ಆ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ಮುಷ್ಕರವನ್ನು ಹಿಂಪಡೆಯಲಾಗಿತ್ತು. ನಂತರ ಸರಕಾರ ನೌಕರರ ಬೇಡಿಕೆಗಳ ಬಗ್ಗೆ ಯಾವುದೇ ತೃಪ್ತಿದಾಯಕ ಕ್ರಮಗಳನ್ನು ಕೈಗೊಂಡಿಲ್ಲ, ಬೇಡಿಕೆಗಳನ್ನು ಈಡೇರಿಸಿಲ್ಲ, ಬದಲಾಗಿ ಮುಷ್ಕರ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ನೀಡಿದೆ. ಇದರಿಂದಾಗಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ನೀಡಿದ ಕರೆಯಂತೆ ಸರಕಾರದ ಮುಂದೆ 23 ಬೇಡಿಕೆಗಳನ್ನು ಮುಂದುವರಿಸಿ, ರಾಜ್ಯವ್ಯಾಪಿ ಗ್ರಾಮ ಆಡಳಿತ ಅಧಿಕಾರಿಗಳು ಧರಣಿ ನಡೆಸುತ್ತಿದ್ದಾರೆ.

ಬೆಳ್ತಂಗಡಿ ಆಡಳಿತ ಸೌಧದ ಎದರು ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಸಿ., ಉಪಾಧ್ಯಕ್ಷೆ ಉಷಾಕಿರಣ್, ಪರಮೇಶ್ ಸಹಿತ 32 ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ.