ಬೆಳ್ತಂಗಡಿ: ದ.ಕ ಜಿಲ್ಲೆಯ ಕಾರಣಿಕ ಕ್ಷೇತ್ರಗಳೊಂದಾಗ ಮುಂಡೂರು ಗ್ರಾಮದ ಮಂಗಳಗಿರಿ ಶ್ರಿನಾಗಕಲ್ಲುರ್ಟಿ ದೇವಸ್ಥಾನದಲ್ಲಿ ಶ್ರೀ ವರಾಹಿ ಮಂತ್ರಮೂರ್ತಿ, ನಾಗಕಲ್ಲುರ್ಟಿ, ಸತ್ಯದೇವತೆ ಹಾಗೂ ಕೊರಗಜ್ಜ, ಶ್ರೀ ಗುಳಿಗ ದೈವಗಳ ಕಾಲಾವಧಿ ನೇಮೋತ್ಸವವು ಆಡಳಿತ ಮೊಕ್ತೇಸರ ರಾಜೀವ ಇವರ ಮಾರ್ಗದರ್ಶನದಲ್ಲಿ ಫೆ. 13 ರಂದು ಊರ ಹಾಗೂ ಪರವೂರುಗಳಿಂದ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರ ಉಪಸ್ಥಿತಿಯಲ್ಲಿ ವೈಭವ ಪೂರ್ಣವಾಗಿ ನಡೆದು ಭಕ್ತರು ಧನ್ಯತೆಯ ಭಾವನ್ನು ಹೊಂದಿದರು.

ಬೆಳಿಗ್ಗೆ ರುದ್ರಯಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಸಂಜೆ ಶ್ರೀ ದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ. ಶ್ರೀ ನಾಗಾಂಬಿಕಾ ಭಜನಾ ಮಂಡಳಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 7ಕ್ಕೆ ನಾಗಂಬಿಕಾ ಅಮ್ಮನವರ ಬಲಿ ಉತ್ಸವ, ದೈವಗಳ ಭಂಡಾರ ಇಳಿಯುವುದು, ದೈವಗಳ ಹಾಗೂ ಶ್ರೀ ನಾಗಾಂಬಿಕಾ ಅಮ್ಮನವರ ಭೇಟಿ, ಸಾರ್ವಜನಿಕ ಅನ್ನಪ್ರಸಾದ, ರಾತ್ರಿ ಶ್ರೀ ವರಾಹಿ ಮಂತ್ರಮೂರ್ತಿ, ನಾಗಕಲ್ಲುರ್ಟಿ, ಸತ್ಯದೇವತೆ ನೇಮೋತ್ಸವ ವಿಜೃಂಭಣೆಯಿಂದ ಜರುಗಿತು. ಬಳಿಕ ರಾತ್ರಿ1 ಗಂಟೆಗೆ ಕೊರಗಜ್ಜ ಕೋಲ, ಮುಂಜಾನೆ ಶ್ರೀ ಗುಳಿಗ ದೈವದ ಕೋಲ ನಡೆಯಿತು. ಕಾಲಾವಧಿ ನೇಮೋತ್ಸವದಲ್ಲಿ ಊರ ಹಾಗೂ ಪರವೂರುಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯತೆಯನ್ನ ಪಡೆದರು.
ಆಡಳಿತ ಮೊಕ್ತೇಸರ ರಾಜೀವ, ಶ್ರೀ ನಾಗಂಭಿಕಾ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಜಯರಾಜ್ ಬಂಗೇರ, ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಮಂಗಳ ಸ್ವ ಸಹಾಯ ತಂಡದ ಸಂತೋಷ್, ಜಯರಾಜ್, ಪ್ರದೀಪ್, ಗುಣಕರ ಕೋಟ್ಯಾನ್, ಸರೋಜ, ಅನೋಜ್, ಪುಷ್ಪಾವತಿ, ಹರೀಶ್ ಹಾಗೂ ಸರ್ವ ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.