37.3 C
ಪುತ್ತೂರು, ಬೆಳ್ತಂಗಡಿ
February 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಗ್ರಾಮೀಣ ಆಸ್ಪತ್ರೆಯ ಮತ್ತೊಂದು ಸಾಧನೆ ಸಂಕೀರ್ಣ; ಬಾಯಿ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಉಜಿರೆ : ಗ್ರಾಮೀಣ ಭಾಗದಲ್ಲಿರುವ ಉಜಿರೆ ಎಸ್.ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಅತ್ಯಂತ ಸಂಕೀರ್ಣವಾಗಿರುವ ಬಾಯಿಯ ಕ್ಯಾನ್ಸರ್‌ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮತ್ತೊಂದು ಸಾಧನೆ ಮಾಡಿದೆ.


ನಿರಂತರ ತಂಬಾಕು ಸೇವನೆಯ ಪರಿಣಾಮ ೩೭ ವರ್ಷ ಪ್ರಾಯದ ಮಹಿಳೆಯೊಬ್ಬರಿಗೆ ನಾಲಗೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ನೋವು ಮತ್ತು ಸುಡುವ ಸಂವೇದನೆಯ ಸಮಸ್ಯೆ ಉಂಟಾಗಿತ್ತು. ಇವರು ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಇಲ್ಲಿನ ವೈದ್ಯರು ರೋಗಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ನಾಲಗೆಯ ಕ್ಯಾನ್ಸರ್ ಇರುವ ಬಗ್ಗೆ ಅನುಮಾನ ಉಂಟಾಗಿತ್ತು. ಬಯಾಪ್ಸಿ ವರದಿಯಲ್ಲಿ ನಾಲಗೆಯಲ್ಲಿ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.

ಕುತ್ತಿಗೆಯ ಸಿಟಿ ಸ್ಕ್ಯಾನ್ ವರದಿ ಪರಿಶೀಲಿಸಿದಾಗ ಕ್ಯಾನ್ಸರ್ ಗೆಡ್ಡೆಗಳು ಕುತ್ತಿಗೆಗೂ ಹರಡಿದ್ದು, ಬಲಭಾಗದಲ್ಲಿ ಕುತ್ತಿಗೆಯ ಪ್ರಮುಖ ನಾಳಗಳನ್ನು ಸುತ್ತುವರಿದು, ನಾಳಗಳನ್ನು ಸಂಕುಚಿತಗೊಳಿಸಿರುವುದು ಕಂಡು ಬಂದಿತ್ತು. ರೋಗಿ ಮತ್ತು ಸಂಬಂಧಿಕರಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ಅಗತ್ಯತೆ ಮತ್ತು ಮುಂದಿನ ಚಿಕಿತ್ಸೆಯ ಬಗ್ಗೆ ಸಲಹೆ ನೀಡಲಾಯಿತು.


ಗೆಡ್ಡೆಯು ಪ್ರಮುಖ ನಾಳಗಳನ್ನು ಸುತ್ತುವರಿದಿದ್ದು, ನಾಳಗಳಿಗೆ ಹಾನಿಯಾಗದಂತೆ ಗೆಡ್ಡೆಯನ್ನು ತೆಗೆಯುವುದು ವೈದ್ಯರಿಗೆ ಅತ್ಯಂತ ಸವಾಲಿನದ್ದಾಗಿತ್ತು. ಬಲಭಾಗದ ಹೆಮಿಗ್ಲೋಸೆಕ್ಟಮಿ (ನಾಲಿಗೆಯ ಬಲಭಾಗದ ಅರ್ಧವನ್ನು ತೆಗೆಯುವುದು) ಜೊತೆಗೆ ಬಲಭಾಗದಲ್ಲಿ ಕುತ್ತಿಗೆಗೆ ಛೇದನ ಮಾಡಿ ಕುತ್ತಿಗೆಗೆ ಕ್ಯಾನ್ಸರ್ ಹರಡದಂತೆ ದುಗ್ದರಸ ಗ್ರಂಥಿಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಯಾವುದೇ ತೊಡಕುಗಳು ಇಲ್ಲದಂತೆ ನಾಳಗಳಿಗೆ ಹಾನಿಯಾಗದಂತೆ ೭ ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿ ಗೆಡ್ಡೆಯನ್ನು ಹೊರತೆಗೆದು ಪ್ಲಾಸ್ಟಿಕ್ ಸರ್ಜರಿ ನಡೆಸಲಾಯಿತು.


ತಲೆ ಮತ್ತು ಕುತ್ತಿಗೆಯ ಆಂಕೊಸರ್ಜನ್, ಕಿವಿ-ಮೂಗು-ಗಂಟಲು ತಜ್ಞ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ| ರೋಹನ್ ದೀಕ್ಷಿತ್, ಪ್ಲಾಸ್ಟಿಕ್ ಮತ್ತು ಪುನರ್ ನಿರ್ಮಾಣ ಶಸ್ತ್ರಚಿಕಿತ್ಸಕ ಡಾ| ಕೃಷ್ಣ ಪ್ರಸಾದ್ ಶೆಟ್ಟಿ ಹಾಗೂ ಅರೆವಳಿಕೆ ತಜ್ಞ ಡಾ| ಸುಪ್ರೀತ್ ಆರ್. ಶೆಟ್ಟಿ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.


ಪ್ರಸ್ತುತ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ರೋಗಿ ಮತ್ತು ಸಂಬಂಧಿಕರಲ್ಲಿ ಸಂತಸ ತಂದಿದೆ. ಡಾ| ಡಿ. ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಇವರ ನಿರಂತರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಈಗಾಗಲೇ ಈ ಆಸ್ಪತ್ರೆಯ ನುರಿತ ತಜ್ಞವೈದ್ಯರ ತಂಡ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ರೋಗಿಗಳ ವಿಶ್ವಾಸಕ್ಕೆ ಪಾತ್ರವಾಗಿದೆ. ಬೆನ್ನುಮೂಳೆ ಗೆಡ್ಡೆ ಶಸ್ತ್ರಚಿಕಿತ್ಸೆಯ ಬಳಿಕ ಬಹಳ ಮುಖ್ಯವಾದ ಡ್ಯೂರಲ್ ಹಾನಿಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಇದುವರೆಗೆ ಎಲ್ಲಿಯೂ ಯಶಸ್ವಿಯಾಗಲಿಲ್ಲ. ಆದರೆ ನಮ್ಮ ಆಸ್ಪತ್ರೆಯಲ್ಲಿ ಕೆಲವೇ ತಿಂಗಳ ಹಿಂದೆ ನಡೆಸಲಾದ ಡ್ಯೂರಲ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಗುರುತಸಲ್ಪಟ್ಟಿತ್ತು. ಇದೀಗ ಅತ್ಯಂತ ಸಂಕೀರ್ಣವಾದ ಬಾಯಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡುವಲ್ಲಿಯೂ ನಮ್ಮ ಆಸ್ಪತ್ರೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ತಿಳಿಸಿದರು.

Related posts

ಪಟ್ರಮೆ: ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ರಸ್ತೆ ಸಂಚಾರ ವ್ಯತ್ಯಯ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಸ್ಕೌಟ್ ಗೈಡ್ಸ್, ಕಬ್ಸ್, ಬುಲ್ ಬುಲ್ಸ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ

Suddi Udaya

ಚೆನ್ನೆಮಣೆ ಗೊಬ್ಬು ಪಂಥೊ ಮತ್ತು ಸಂಧಿ ಪಾರ್ದನ ಸುಗಿಪ್ಪು ಪಂಥೊದ ಸಮಾರೋಪ ಸಮಾರಂಭ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ

Suddi Udaya

ಕಲ್ಲೇರಿಯ ಪವರ್ ಮ್ಯಾನ್ ಸಂದೀಪ್ ಎಂ ರವರು ಮಂಗಳೂರಿನ ಮಲ್ಲಿಕಟ್ಟೆ ಕಾರ್ಯ ಮತ್ತು ಪಾಲನಾ ಶಾಖೆಗೆ ಪದೋನ್ನತಿ

Suddi Udaya

ಕನ್ನಡ ಪ್ರಬಂಧ ಸ್ಪರ್ಧೆ: ಶ್ರೀ ಧ.ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿನಿ ಕು| ಗಗನ್ಯ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!