ಬೆಳ್ತಂಗಡಿಯ ನೆರಿಯ ಗ್ರಾಮದ ಕಾಟಾಜೆ ಸುಂದರ ಮಲೆಕುಡಿಯ ಅವರ ಕೈಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕೊಟ್ಟಿರುವ ತೀರ್ಪು ಅತ್ಯಂತ ಐತಿಹಾಸಿಕ ಮತ್ತು ಸ್ವಾಗತಾರ್ಹವಾದುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಘಟಕ ಹರ್ಷ ವ್ಯಕ್ತಪಡಿಸಿದೆ.
ಇಡೀ ಈ ಪ್ರಕರಣವನ್ನು ನ್ಯಾಯಾಲಯದ ಕಟಕಟೆಗೆ ತಲುಪಿಸಿ ದಾಳಿಗೊಳಗಾದ ಕುಟುಂಬವನ್ನು ರಕ್ಷಿಸಲು ನಡೆಸಿದ ಪ್ರಯತ್ನಗಳು , ಹೋರಾಟಗಳು ಅತ್ಯಂತ ರೋಮಾಂಚನಕಾರಿ. ಈ ಪ್ರಕರಣವನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಡಿವೈಎಫ್ಐ , ಸಿಪಿಐ(ಎಂ) ಸೇರಿದಂತೆ ಮಲೆಕುಡಿಯರ ಸಮುದಾಯದ ಸಂಘಟನೆಗಳು ಮತ್ತು ಇತರೆ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ನಿರಂತರ ಹೋರಾಟವನ್ನು ನಡೆಸಿದವು.
ಆಸ್ಪತ್ರೆಗೆ ಸಿಪಿಐ(ಎಂ) ನ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿ.ಕಾ.ಸೀತರಾಮ್ ಯೆಚೂರಿ, ಮುಂದುವರಿದ ಹೋರಾಟದಲ್ಲಿ ತ್ರಿಪುರ ಸಂಸತ್ ಸದಸ್ಯರಾಗಿದ್ದ ಕಾಂ.ಜಿತೇಂದ್ರ ಚೌಧುರಿ ಭಾಗವಹಿಸಿದ್ದರು. ಕಿಸಾನ್ ಸಭಾದ ವಿಜೂಕೃಷ್ಣನ್ ಭೇಟಿ ನೀಡಿದ್ದರು.
ಈ ಪ್ರಕರಣದಲ್ಲಿ ಧೃಡವಾಗಿ ನಿಂತು ಅತ್ಯಂತ ಧೈರ್ಯದಿಂದ ಎಲ್ಲಾ ಒತ್ತಡ, ಸಮಸ್ಯೆಗಳನ್ನು ಎದುರಿಸಿ ನಿಂತ ಸುಂದರ ಮಲೆಕುಡಿಯ ಮತ್ತು ಅವರ ಕುಟುಂಬದವರನ್ನು ವಿಜಯವಾಡದಲ್ಲಿ ಜರುಗಿದ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ ನ ಅಖಿಲ ಭಾರತ ಸಮ್ಮೇಳನದಲ್ಲಿ ಕೇರಳದ ಮುಖ್ಯಮಂತ್ರಿ ಕಾಂ. ಪಿಣರಾಯಿ ವಿಜಯನ್ ರವರು ಅಭಿನಂದಿಸಿದ್ದರು.
ಈ ಪ್ರಕರಣ ತಾರ್ಕಿಕ ಹಂತಕ್ಕೆ ತಲುಪಲು ಶ್ರಮಿಸಿದ ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ , ಬಂಟ್ವಾಳ ಎಎಸ್ಪಿಯಾಗಿದ್ದ ರಾಹುಲ್ ಕುಮಾರ್ ಸೇರಿದಂತೆ ಸುಂದರ ಮಲೆಕುಡಿಯರ ಪರವಾಗಿ ವಾದಿಸಿದ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತ . ಇಡೀ ಘಟನೆಗೆ ಕಾರಣವಾಗಿದ್ದ ಜಮೀನು ವಿವಾದ ಇನ್ನೂ ಜೀವಂತವಾಗಿರುವುದು ನಮ್ಮ ವ್ಯವಸ್ಥೆಯ ದುರಂತ. ನೆರಿಯ ಗ್ರಾಮದ ಕಾಟಾಜೆ , ಪರ್ಪಳ ಪ್ರದೇಶದ ಮಲೆಕುಡಿಯ ಸಮುದಾಯದ ಮನೆ , ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡಿರುವ ಜಮೀನಿಗೆ ಸೂಕ್ತ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತವಾಗಬೇಕು , ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಹೋರಾಟ ನಡೆಸಬೇಕಾದೀತೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ವಸಂತ ನಡ , ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಸಂಚಾಲಕ ಶೇಖರ್ ಲಾಯಿಲ ಎಚ್ಚರಿಕೆ ನೀಡಿದ್ದಾರೆ.