
ನಾವೂರು: ಕಳೆದ 6 ವರ್ಷಗಳ ಹಿಂದೆ ಪ್ರಾರಂಭಗೊಂಡ ನಾವೂರು ಹೊಡಿಕ್ಕಾರು ರಸ್ತೆಯ ಕಾಮಗಾರಿ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಇದರ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಅವರು ಆಶ್ವಾಸನೆ ನೀಡಿದ್ದರೂ ಕೂಡ ಇಲ್ಲಿಯವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ.

ಪ್ರಾರಂಭದಲ್ಲಿ ತ್ವರಿತಗತಿಯಲ್ಲಿ ಕೆಲಸವನ್ನು ಮಾಡುವುದಾಗಿ ತಿಳಿಸಿರುವ ಗುತ್ತಿಗೆದಾರ 6 ವರುಷಗಳು ಕಳೆದರೂ ಇಲ್ಲಿಯವರೆಗೆ ಕಾಮಗಾರಿಯನ್ನು ಆಮೆಗತಿಯಲ್ಲಿ ಮಾಡಿಕೊಂಡು ಬಂದಿರುತ್ತಾರೆ. ಹಿಂದಿನ ಡಾಂಬರು ರಸ್ತೆಯನ್ನು ಅಗೆದು ಸ್ವಲ್ಪಕಾಂಕ್ರೀಟ್ ಹಾಕಿದ್ದಾರೆ. ಉಳಿದ ಭಾಗದಲ್ಲಿ ಜಲ್ಲಿಯನ್ನು ಹಾಕಿ ಹೋದವರು ಇಲ್ಲಿಯವರೆಗೆ ಕಾಮಗಾರಿ ಪ್ರಾರಂಭ ಮಾಡಿರುವುದಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸುವುದಿಲ್ಲ

ಇದರಿಂದ ಆಕ್ರೋಶಗೊಂಡ ಈ ಭಾಗದ ಜನರು ರಸ್ತೆಯಲ್ಲಿ ಬ್ಯಾನರ್ ಅಳವಡಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳದೆ ಹೋದರೆ ಈ ಭಾಗದ ಜನರೇ ಹಣ ಸಂಗ್ರಹಿಸಿ ಗುತ್ತಿಗೆದಾರ ಹಾಕಿದ ಜಲ್ಲಿಯನ್ನು ತೆಗೆಯುವುದರ ಜೊತೆ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.