ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ಪಿ ಹೆಗ್ಡೆ, INSPIRE ಮಾನಕ್ ವಿಜ್ಞಾನ ಯೋಜನೆಯಡಿ ಪ್ರಸ್ತುತ ಪಡಿಸಿದ “Animal Vital Monitoring system” ಎಂಬ ಸಂಶೋಧನಾತ್ಮಕ ವಿಜ್ಞಾನ ಮಾದರಿ ಜಪಾನಿನ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯು ಆಯೋಜಿಸುವ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ SAKURA ಗೆ ಆಯ್ಕೆಗೊಂಡಿದೆ.
ಜೂನ್ 15 ರಿಂದ 21ರ ವರೆಗೆ ಜಪಾನಿನಲ್ಲಿ ಜರಗುವ ಈ ವಿಜ್ಞಾನ ಕಾರ್ಯಕ್ರಮದಲ್ಲಿ ಭಾರತದಿಂದ ಆಯ್ಕೆಗೊಂಡಿರುವ 54 ಮಂದಿ ವಿದ್ಯಾರ್ಥಿಗಳಲ್ಲಿ ರಾಹುಲ್ ಪಿ ಹೆಗ್ಡೆ ಕೂಡ ಓರ್ವನಾಗಿದ್ದಾನೆ.
ಈ ವಿಜ್ಞಾನ ಮಾದರಿ ಪ್ರಾಣಿಗಳ ಆರೋಗ್ಯ ತಪಾಸಣೆಗೆ ಸಂಬಂಧಿಸಿದ್ದು, ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ಇದು ಎಚ್ಚರಿಕೆ ಗಂಟೆಯೊಂದಿಗೆ ಮಾಹಿತಿಯನ್ನು ನೀಡುವ ವೈಜ್ಞಾನಿಕ ಅನ್ವೇಷಣೆಯಾಗಿದೆ..
ಎಕ್ಸಲೆಂಟ್ ATL ಲ್ಯಾಬ್ ಅಡಿಯಲ್ಲಿ INSPIRE ಯೋಜನೆಯಡಿ 2023ನೇ ಸಾಲಿನಲ್ಲಿ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ರಾಹುಲ್ ಪಿ ಹೆಗ್ಡೆ ಸಿದ್ದಪಡಿಸದ್ದ ಈ ಮಾದರಿ ಈ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡು ಎಲ್ಲರ ಗಮನ ಸೆಳೆದಿತ್ತು.
ಕೇಂದ್ರ ಸರ್ಕಾರದ “ಮೇಕ್ ಇನ್ ಇಂಡಿಯಾ” ಅಭಿಯಾನದಡಿಯಲ್ಲಿ ಸಂಸ್ಥೆಯ ಅಧ್ಯಕ್ಷರ ಮತ್ತು ಕಾರ್ಯದರ್ಶಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಅತ್ಯಂತ ಆಸಕ್ತಿಯಲ್ಲಿ ಮಾಡುತ್ತಿರುವ ರಾಹುಲ್ ಪಿ ಹೆಗ್ಡೆ ಭವಿಷ್ಯದಲ್ಲಿ ತನ್ನದೇ ಆದ ಒಂದು ದೊಡ್ಡ ಕೊಡುಗೆಯನ್ನು ವಿಜ್ಞಾನ ಕ್ಷೇತ್ರಕ್ಕೆ ನೀಡುವ ಕನಸು ಹೊತ್ತಿದ್ದಾನೆ.
ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಆಯೋಜಿಸುವ INSPIRE ಕಾರ್ಯಕ್ರಮದಲ್ಲಿ ಪ್ರತಿವರ್ಷವೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರೂ.10,000 ಸ್ಕಾಲರ್‌ಶಿಪ್‌ನೊಂದಿಗೆ ಜಿಲ್ಲಾ ರಾಜ್ಯ-ರಾಷ್ಟ್ರಮಟ್ಟಕ್ಕೆ ಆಯ್ಕೆಗೊಳ್ಳುತ್ತಿದ್ದಾರೆ.
ಆಯ್ಕೆಗೊಂಡ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.