ಶಿರಸಿ :-ಸೇವಾಧಾಮ – ಸೇವಾಭಾರತಿ ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಶಿರಸಿ ಸ್ಕ್ಯಾನ್ ಸೆಂಟರ್, ರೋಟರಿ ಕ್ಲಬ್ ಶಿರಸಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿರಸಿ ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 30ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾದ ಉದ್ಘಾಟನಾ ಸಮಾರಂಭವು ಫೆ. 22 ರಂದು ಶಿರಸಿ ಸ್ಕ್ಯಾನ್ ಡೈಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಿರಸಿ ಮತ್ತು ಸಿದ್ದಾಪುರ ಮಾನ್ಯ ಶಾಸಕ ಭೀಮಣ್ಣ ಟಿ. ನಾಯ್ಕ್ ಉದ್ಘಾಟಿಸಿ ಸೇವಾಧಾಮ ಮಾಡುವ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ತನ್ನ ಕ್ಷೇತ್ರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಶಿಬಿರವು ಇಂದು ನಡೆಯುತ್ತಿದ್ದು ದಿವ್ಯಾಂಗರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯವನ್ನು ನೀಡುವಂತೆ ನನ್ನ ಕಡೆಯಿಂದ ಸಂಪೂರ್ಣ ಸಹಕಾರ ಮತ್ತು ಜೊತೆಯಿದ್ದು ಎಲ್ಲಾ ಕೆಲಸವನ್ನು ಮಾಡಿಕೊಡುತ್ತೇನೆ ಎಂಬ ಭರವಸೆಯನ್ನು ನೀಡಿ ಉದ್ಘಾಟಕರ ನುಡಿಗಳನ್ನಾಡಿದರು.
ಸಂಸ್ಥೆಯ ಸಂಸ್ಥಾಪಕ ಕೆ. ವಿನಾಯಕ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿ ಉಚಿತವಾಗಿ ಮೂರನೇ ಬಾರಿ ಶಿಬಿರವನ್ನು ಆಯೋಜನೆ ಮಾಡಲು ಅನುವು ಮಾಡಿಕೊಟ್ಟ ಶಿರಸಿ ಸ್ಕ್ಯಾನ್ ಡೈಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ಗೆ ಧನ್ಯವಾದಗಳನ್ನು ವ್ಯಕ್ತಪಡಿಸಿ, ಮಾನ್ಯ ಶಾಸಕರಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಮಾಸಾಶನ ರೂ. 5,000/- ಕ್ಕೆ ಹೆಚ್ಚಿಸುವಂತೆ ಮತ್ತು ಆರೈಕೆದಾರರಿಗೆ ಭತ್ಯೆ ನೀಡುವ ಹಾಗೆ ಆಯಾ ಇಲಾಖೆಗಳಿಗೆ ಶಿಫಾರಸ್ಸು ಮಾಡಬೇಕೆಂದು ಮನವಿಯನ್ನು ಹಸ್ತಾಂತರಿಸಿ ದಿವ್ಯಾಂಗರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿರಸಿ ರೋಟರಿ ಕ್ಲಬ್ ಅಧ್ಯಕ್ಷರಾದ ರೊ| ಡಾ. ಸುಮನ್ ಹೆಗಡೆ, ಶಿರಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾದ ರೊ|ಡಾ. ಕೃಷ್ಣಮೂರ್ತಿ ಹೆಗಡೆ, ಶಿರಸಿ ಸ್ಕ್ಯಾನ್ ಸೆಂಟರ್ ನಿರ್ದೇಶಕರು ರೊ| ಡಾ. ದಿನೇಶ್ ಹೆಗಡೆ , ಶಿರಸಿ ರೋಟರಿ ಕ್ಲಬ್ ಇವೆಂಟ್ ಛೇರ್ ಮ್ಯಾನ್ ರೊ| ಮಹೇಶ್ ತೆಲಂಗ, ಶಿರಸಿ ರೋಟರಿ ಕ್ಲಬ್ ಕಾರ್ಯದರ್ಶಿ ರೊ| ಸರಸ್ವತಿ ಎನ್ ರವಿ, ಸಮೃದ್ಧಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಉಪಾಧ್ಯಕ್ಷರು ಮತ್ತು ನಿರ್ದೇಶಕರು ನಾರಾಯಣ ಆರ್ ಕೋಮಾರ್ ಮತ್ತು ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ಜಗದೀಶ್ ಗೌಡ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರ ಸಂಯೋಜಕ ಸುಧಾಕರ್ ಪೂಜಾರಿ ಸ್ವಾಗತಿಸಿ, ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ ಕಾರ್ಯಕ್ರಮವನ್ನು ನಿರೂಪಿಸಿ, ಫಂಡ್ ರೈಸಿಂಗ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಆಶ್ರೀತ್ ಸಿ.ಪಿ ಧನ್ಯವಾದವಿತ್ತರು.
ಒಟ್ಟು 17 ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.