ಬೆಳ್ತಂಗಡಿ: ದ್ವಿತೀಯ ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ಬಹಳ ಮಹತ್ವದ ಘಟ್ಟ. ಇಲ್ಲಿ ತೆಗೆಯುವ ಒಂದೊಂದು ಅಂಕವೂ ಭವಿಷ್ಯಕ್ಕೆ ಬುನಾದಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಜೀವ ಶಾಸ್ತ್ರ, ಅಥವಾ ಇತರ ಆಯ್ಕೆಯ ವಿಜ್ಞಾನ ವಿಷಯಗಳಲ್ಲಿ ತಲಾ 30 ರಂತೆ 3 ವಿಷಯಗಳಿಗೆ ಒಟ್ಟು 90 ಅಂಕಗಳಿವೆ.
ವಿದ್ಯಾರ್ಥಿಯ ಅತ್ಯುತ್ತಮ ಫಲಿತಾಂಶಕ್ಕೆ ಪ್ರಾಯೋಗಿಕ ಪರೀಕ್ಷೆಯ ಅಂಕಗಳು ತೀರಾ ಅವಶ್ಯ. ಜೊತೆಗೆ ಸಿ ಇ ಟಿ ಪರೀಕ್ಷೆಗೆ ಪಿಯು ಅಂಕಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳುವುದರಿಂದ , ಪ್ರಾಯೋಗಿಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ನಿರ್ಲಕ್ಷಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ತೀರಾ ಅನಿವಾರ್ಯ ಕಾರಣಗಳಿಂದ ಪ್ರಾಯೋಗಿಕ ಪರೀಕ್ಷೆಗಳಿಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಡಲು ಇಲಾಖೆಯನ್ನು ಕೋರಲು ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಅವರನ್ನು ಕೆಲವು ಉಪನ್ಯಾಸಕರು ಸಂಪರ್ಕಿಸಿ, ವಿನಂತಿಸಿದ್ದರು. ರಕ್ಷಿತ್ ಶಿವರಾಂ ಅವರು ಈ ಕುರಿತು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕಾರಿಗಳ ಗಮನ ಸೆಳೆದರು.
ಇದೀಗ ಮಂಡಳಿಯು ಈ ತಿಂಗಳ 24, 25 ಹಾಗೂ 27 ರಂದು ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಆದೇಶ ಹೊರಡಿಸಿದೆ. ಆ ಮೂಲಕ ಅನಿವಾರ್ಯ ಕಾರಣಗಳಿಂದ ಪ್ರಾಯೋಗಿಕ ಪರೀಕ್ಷೆ ತೆಗೆದು ಕೊಳ್ಳಲು ಅಸಾಧ್ಯವಾದ ವಿದ್ಯಾರ್ಥಿಗಳಿಗೆ ಮರು ಅವಕಾಶ ಕಲ್ಪಿಸಿದೆ. ತಮ್ಮ ಮನವಿಗೆ ಸ್ಪಂದಿಸಿದ ರಕ್ಷಿತ್ ಶಿವರಾಂ ಅವರಿಗೆ ಸಮಸ್ತ ವಿದ್ಯಾರ್ಥಿಗಳ ಪರವಾಗಿ ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.