ಬೆಳ್ತಂಗಡಿ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಬೆಳ್ತಂಗಡಿ ಸಿ.ವಿ.ಸಿ ಹಾಲ್ ವಸತಿ ವಿದ್ಯಾರ್ಥಿನಿ ನಿಲಯದಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಬೆಳಕಿಗೆ ಬಂದ ನಂತರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸೂಕ್ತ ಕ್ರಮಗಳನ್ನು ಕೈಗೊಂಡು ನೂತನ ಮೇಲ್ವಿಚಾರಕರನ್ನು ನೇಮಿಸಿದ್ದರು, ಆದರೆ ಇದೀಗ ಹಾಸ್ಟೆಲ್‌ನಲ್ಲಿ ಸಮಸ್ಯೆಗಳು ಪರಿಹಾರವಾಗಿರುವ ಬಗ್ಗೆ ವರದಿಯಾಗಿದೆ.
ವಸತಿ ನಿಲಯ ಅವ್ಯವಸ್ಥೆಯಿಂದ ಕೂಡಿದ್ದು ಮೆನುವಿನಲ್ಲಿ ಹಾಕಿರುವ ಯಾವುದೇ ಆಹಾರ ಸರಿಯಾಗಿ ನೀಡುವುದಿಲ್ಲ, ಆಹಾರ ರುಚಿಯೂ ಇರುವುದಿಲ್ಲ. ಯಾವುದೇ ಕಾರ್ಯಕ್ರಮ ಜರುಗುವುದಿಲ್ಲ. ಚಟುವಟಿಕೆಗಳಾಗಲಿ ಯಾವುದು ನಡೆಯುವುದಿಲ್ಲ. ಶೌಚಾಲಯ, ಸ್ನಾನದ ಕೊಠಡಿ ಸೇರಿದಂತೆ ಸ್ವಚ್ಛತಾ ವ್ಯವಸ್ಥೆ ಹದಗೆಟ್ಟಿದೆ. ಭಾಷಾ ತಾರಾತಮ್ಯತೆ ಹೆಚ್ಚಾಗಿದೆ. ಶೈಕ್ಷಣಿಕ ಚಟುವಟಿಕೆಗೆ ಯಾವುದೇ ರೀತಿಯ ಪ್ರೋತ್ಸಾಹ ದೊರೆಯುತ್ತಿಲ್ಲ, ಊರಿನವರು ಮತ್ತು ಹೊರಗಿನವರು (ಘಟ್ಟದವರು) ಎಂಬ ಬೇಧ-ಭಾವ ನಡೆಯುತ್ತಿದೆ, ಎಂದು ನೊಂದ ವಿದ್ಯಾರ್ಥಿನಿಯರು ಆರೋಪಿಸಿದ್ದರು. ಆದರೆ ಇದೀಗ ನೂತನ ವಾರ್ಡನ್ ನಿಯೋಜನೆ ಬಳಿಕ ಈ ಎಲ್ಲಾ ಸಮಸ್ಯೆಗಳು ವಸತಿ ನಿಲಯದಲ್ಲಿ ಬಗೆಹರಿದಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಚೆನ್ನಾಗಿ ನೋಡಿಕೊಳ್ಳುತ್ತಾರೆ: ವಸತಿ ನಿಲಯದಲ್ಲಿ ಬೀಳ್ಕೂಡುಗೆ ಕಾರ್ಯಕ್ರಮ ನಡೆಸಿದ್ದಾರೆ. ಮೆನು ಚಾರ್ಟ್ನಲ್ಲಿ ಆಹಾರ ಸಮರ್ಪಕವಾಗಿ ಸಿಗುತ್ತಿದೆ. ಈ ಹಿಂದೆ ಇದ್ದ ಎಲ್ಲಾ ಸಮಸ್ಯೆಗಳು ಹೊಸ ವಾರ್ಡನ್ ಡಾ. ಅರ್ಷಿಯಾ ರವರು ಬಂದ ಮೇಲೆ ಬಗೆಹರಿಸಿದ್ದಾರೆ. ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಸಮಸ್ಯೆಗಳನ್ನು ತಿಳಿಸಿದರೆ ಸ್ಪಂದಿಸುತ್ತಾರೆ ಎಂದು ವಿದ್ಯಾರ್ಥಿನಿಯೋರ್ವರು ಸುದ್ದಿ ಉದಯ ಪತ್ರಿಕೆಗೆ ತಿಳಿಸಿದ್ದಾರೆ.