ಬೆಳ್ತಂಗಡಿ: ಕೆಪಿಜೆಪಿ ಪಕ್ಷವು ಓರ್ವ ಶಾಸಕ ಮತ್ತು ಸಚಿವರನ್ನು ನೀಡಿದ ಹೆಗ್ಗಳಿಗೆ ಕಾರಣವಾಗಿದೆಯಲ್ಲದೆ, ಇತ್ತೀಚೆಗೆ ರಾಣೇಬೆನ್ನೂರಿನಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದಿಂದ ಸುಮಾರು ೧೦ ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹೀಗಾಗಿ ಪಕ್ಷ ಮುಂದಿನ ದಿನಗಳಲ್ಲಿ ಗ್ರಾ.ಪಂ. ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಸ್ಪರ್ಧಿಸುವ ತಯಾರಿ ನಡೆಸುತ್ತಿದೆ ಎಂದು ಕೆಪಿಜೆಪಿ ಪಕ್ಷದ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಡಾ| ಡಿ. ಮಹೇಶ್ ಗೌಡ ಹೇಳಿದರು.
ಉಜಿರೆಯ ಓಷಿಯನ್ ಪರ್ಲ್‌ನಲ್ಲಿ ಫೆ.25ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತ ಧೈರ್ಯ ಧೋರಣೆಗಳನ್ನು ಮೆಚ್ಚಿಕೊಂಡ ಚಿತ್ರ ರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಉಪೇಂದ್ರರಂತ ದಿಗ್ಗಜರೇ ಸ್ವಯಂಪ್ರೇರಿತರಾಗಿ ಕೆಪಿಜೆಪಿ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸುವ ಮೂಲಕ ಇತರ ರಾಜಕೀಯ ಪಕ್ಷಗಳಿಗೆ ಮಾದರಿಯಾಗಿದೆ ಎಂದರು.
ಧರ್ಮಸ್ಥಳ-ಸುಬ್ರಹ್ಮಣ್ಯ ಪಾದಯಾತ್ರೆ: ಕೆಪಿಜೆಪಿ ಪಕ್ಷದಿಂದ ಕುಂಭಮೇಳ ಯಾತ್ರೆ ಕೈಗೊಂಡು, ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ನಂತರ ಕಾಶಿ, ಅಯೋಧ್ಯೆ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿನ ಸಾನಿಧ್ಯ ಕ್ಷೇತ್ರಗಳ ಪವಿತ್ರ ತೀರ್ಥಗಳೊಂದಿಗೆ ಪಕ್ಷದ ಸುಮಾರು ೨೫೦ಕ್ಕೂ ಅಧಿಕ ಮಂದಿ ಹಾಸನದಿಂದ ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗಂಗಾಜಲ ನೀಡಿದ್ದೇವೆ. ಬಳಿಕ ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಕಾನೂನು ಸಲಹೆಗಾರ್ತಿ ಸುಮಾ, ಪಕ್ಷದ ಪ್ರಮುಖರಾದ ಸವಿತಾ, ಪುಟ್ಟಲಕ್ಷ್ಮೀ, ಶೋಭಾ, ಜಯಚಂದ್ರ ನೆಲಮಂಗಲ ಉಪಸ್ಥಿತರಿದ್ದರು.