ಬೆಳ್ತಂಗಡಿ: ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಮತ್ತು ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇತ್ರಾವತಿ ನದಿಯ ನಿಡಿಗಲ್ ಸೇತುವೆಗಳಿಗೆ ಕಲ್ಮಂಜ ಗ್ರಾಮ ಪಂಚಾಯಿತಿ ವತಿಯಿಂದ ಸಿಸಿಟಿವಿ ಅಳವಡಿಸಲಾಗಿದೆ.
ಇಲ್ಲಿನ ಸೇತುವೆಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ತಂದು ಸುರಿಯುತ್ತಿದ್ದ ಭಾರಿ ಪ್ರಮಾಣದ ತ್ಯಾಜ್ಯ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹಗೊಂಡಿರುವ ನೀರನ್ನು ಸೇರಿ, ನೀರು ಮಲೀನಗೊಳ್ಳುವ ಸಾಧ್ಯತೆ ಇದ್ದು, ಈ ಕುರಿತು ವಿಜಯ ಕರ್ನಾಟಕದಲ್ಲಿ ವರದಿ ಪ್ರಕಟವಾಗಿತ್ತು. ಕಲ್ಮಂಜ ಮತ್ತು ಮುಂಡಾಜೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಗಳಲ್ಲಿ ಈ ವಿಚಾರ ಭಾರಿ ಚರ್ಚೆಗೂ ಕಾರಣವಾಗಿತ್ತು.
ಎರಡು ಗ್ರಾಮ ಪಂಚಾಯಿತಿಗಳ ವತಿಯಿಂದ ಮಂಗಳವಾರ ಇಲ್ಲಿ ಸ್ವಚ್ಛತೆ ಕಾರ್ಯ ನಡೆದ ಬಳಿಕ ಕಲ್ಮಂಜ ಗ್ರಾಮ ಪಂಚಾಯಿತಿ ವತಿಯಿಂದ ಸೇತುವೆಗಳ ವ್ಯಾಪ್ತಿಗೆ ಸಿಸಿಟಿವಿ ಅಳವಡಿಸಲಾಗಿದೆ. ಇದರ ಚಿತ್ರಣಗಳು ಪಂಚಾಯಿತಿ ಹಾಗೂ ಅಗತ್ಯ ಸಿಬ್ಬಂದಿಗೆ ರವಾನೆಯಾಗುತ್ತವೆ. ಇದು ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಲು ಮಾಡಿರುವ ವ್ಯವಸ್ಥೆಯಾಗಿದ್ದು, ನದಿಯಲ್ಲಿ ಸಂಗ್ರಹಗೊಂಡಿರುವ ನೀರನ್ನು ಕಲುಷಿತಗೊಳ್ಳದಂತೆ ಕಾಪಾಡುವುದು ಪಂಚಾಯಿತಿಯ ಕರ್ತವ್ಯವಾಗಿದೆ ಎಂದು ಕಲ್ಮಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ ತಿಳಿಸಿದ್ದಾರೆ.