ಮಡಂತ್ಯಾರು : “ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಕ್ರೀಡೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪಠ್ಯದ ಜೊತೆಗೆ ಕ್ರೀಡೆಯನ್ನೂ ಬದುಕಿನ ಭಾಗವಾಗಿಸಿಕೊಳ್ಳಬೇಕು” ಎಂಬುದಾಗಿ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ.ಡಾ ಸ್ಟ್ಯಾನಿ ಗೋವಿಯಸ್ ನುಡಿದರು.
ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದುಬೈನ ಫೋರ್ಟೆಸ್ ಎಜುಕೇಷನ್ ಮತ್ತು ಇನ್ವೆಸ್ಟ್ ಮೆಂಟ್ ನ ಸೀನಿಯರ್ ಪ್ರಾಪರ್ಟಿ ಆಫೀಸರ್ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿರುವ ಅನೀಶ್ ಕಾರ್ಲ್ ಅವರು “ಕ್ರೀಡೆಯು ಶಿಸ್ತು, ಗೌರವ, ನಾಯಕತ್ವವನ್ನು ಬೆಳೆಸಿ, ಸಮಸ್ಯೆಗಳಿಂದ ಹೊರಬರುವ ಛಾತಿಯನ್ನು ರೂಢಿಸಿಕೊಳ್ಳಲು ಸಹಕಾರಿ” ಎಂದರು .
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಲ್ಸನ್ ರೂಪೇಶ್ ಮೊರಾಸ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಅಲೆಕ್ಸ್ ಐವನ್ ಸಿಕ್ವೇರಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರಕಾಶ್ ಡಿ ಸೋಜಾ ವಂದಿಸಿದರು. ಪ್ರೊ ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕ್ರೀಡಾ ಕಾರ್ಯದರ್ಶಿ ಮೊಹಮ್ಮದ್ ಸಿಯಾನ್ ಕ್ರೀಡಾಧ್ವಜವನ್ನು ಸ್ವೀಕರಿಸಿದರು.
ಕ್ರಿಕೆಟ್ ನಲ್ಲಿ ಮಂಗಳೂರು ವಿ ವಿ ಯನ್ನು ಪ್ರತಿನಿಧಿಸಿದ ರಿಷಿ ಬಿ ಶೆಟ್ಟಿ ಕ್ರೀಡಾಜ್ಯೋತಿಯನ್ನು ಬೆಳಗಿದರು. ಆನಂತರ ಆಕರ್ಷಕ ಪಥಸಂಚಲನ ನಡೆಯಿತು.