ಬೆಳ್ತಂಗಡಿ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಈಗ ಇರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಮಾಡಿ ಮಾ.7ರಂದು ಮಂಡನೆಯಾಗುವ ಬಜೆಟ್‌ನಲ್ಲಿ ರೂ.500 ಕೋಟಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಶಾಸಕ ಐವಾನ್ ಡಿ’ ಸೋಜ ಹೇಳಿದರು.
ಅವರು ಫೆ.28 ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬಜೆಟ್‌ನಲ್ಲಿ ಕರಾವಳಿ ಕರ್ನಾಟಕ್ಕೆ ಹೆಚ್ಚಿನ ಒತ್ತು ನೀಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದೇನೆ. ಕರಾವಳಿಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ, ರಸ್ತೆ, ಸೇತುವೆಗಳ ನಿರ್ಮಾಣ, ಯೂನಿರ್ವಸಿಟಿ, ಕಾಲೇಜು, ಬಂದರು, ಮೀನುಗಾರಿಕೆ ಅಭಿವೃದ್ಧಿ ಮೊದಲಾದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮುಂದಿನ ಬಜೆಟ್‌ನಲ್ಲಿ ರೂ.5೦೦ ಕೋಟಿ ಮೀಸಲಿಡುವಂತೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ:
ರಾಜ್ಯದ ಗುಲ್ಬರ್ಗ, ಧಾರಾವಾಡದಲ್ಲಿ ಈಗಾಗಲೇ ಹೈಕೋರ್ಟ್ ಪೀಠ ಇದೆ. ಅದೇ ರೀತಿ ಮಂಗಳೂರಿನಲ್ಲಿಯೂ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು. ಇಲ್ಲಿ ಸ್ಥಾಪನೆ ಮಾಡಿದರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಈ ಬೇಡಿಕೆಯ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು. ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಯಾಗಿ, ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕೆಲಸಗಳಾಗಬೇಕು, ಮಂಗಳೂರಿನಲ್ಲಿರುವ ಎನ್.ಐ.ಟಿಯನ್ನು ಐ.ಐ.ಟಿಯಾಗಿ ಮಾಡಬೇಕು. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲತೆಗಳು ಆಗಲಿದೆ ಇದರ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಯಶಸ್ವಿ:
ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಯೋಜನೆಯು ತಲುಪಬೇಕು ಎಂಬ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ಯಾರಂಟಿ ಶಿಬಿರಗಳನ್ನು ನಡೆಸಿ ಯೋಜನೆ ಸಿಗದಿರುವವರನ್ನು ಸೇರ್ಪಡೆಗೊಳಿಸುವ ಕೆಲಸ ನಡೆಸಲಾಗಿದೆ. ಈಗಾಗಲೇ ಬೆಳ್ತಂಗಡಿ ತಾಲೂಕಿಗೆ ರೂ.೩೦೪ ಕೋಟಿ ಅನುದಾನ ಬಂದಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಲ್ಲಿ 7,59,78,170 ಫಲಾನುಭವಿಗಳಿಗೆ ರೂ. 247 ಕೋಟಿ, ಗೃಹಲಕ್ಷ್ಮೀ ಯೋಜನೆಯಲ್ಲಿ 3,77,657 ಫಲಾನುಭವಿಗಳಿಗೆ ರೂ.1020 ಕೋಟಿ, ಗೃಹಜ್ಯೋತಿಯಲ್ಲಿ 5,61,428 ಕುಟುಂಬಗಳಿಗೆ ರೂ.639.94 ಕೋಟಿ, ಯುವನಿಧಿಯಲ್ಲಿ 5460 ಮಂದಿಗೆ ರೂ.6.3 ಕೋಟಿ, ಅನ್ನಭಾಗ್ಯದಲ್ಲಿ 2,76,683 ಕುಟುಂಬಗಳಿಗೆ ರೂ.17.02 ಕೋಟಿ ಸೇರಿದಂತೆ ಸುಮಾರು ಎರಡು ಸಾವಿರ ಕೋಟಿಗೂ ಮಿಕ್ಕಿ ಹಣ ನೀಡಲಾಗಿದೆ. ಆದರೆ ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಿರುವ ಹರೀಶ್ ಪೂಂಜ, ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್ ಇದಕ್ಕೆ ಉತ್ತರ ಕೊಡಬೇಕು ಎಂದು ತಿಳಿಸಿದರು.
ಕಾರ್ಡಿಗೆ 10 ಕೆ.ಜಿ ಅಕ್ಕಿ ವಿತರಣೆ:
ಬಿಪಿಎಲ್ ಕಾರ್ಡ್‌ಗಳಿಗೆ ೫ ಕೆ.ಜಿ ಅಕ್ಕಿ ವಿತರಣೆ ಮಾಡಿದಾಗ ಅದು ಮೋದಿಯವರು ಕೊಡುವ ಅಕ್ಕಿ ಎಂದು ಬಿಜೆಪಿಯವರು ಹೇಳಿದರು. ರಾಜ್ಯ ಸರಕಾರ ಅಕ್ಕಿಯ ಹಣವನ್ನು ನೇರವಾಗಿ ಫಲಾನುಭವಿಯ ಖಾತೆಗೆ ಹಾಕುತ್ತಿದೆ. ಇನ್ನು ಮುಂದೆ ೧೦ ಕೆ.ಜಿ ಅಕ್ಕಿಯನ್ನು ಫಲಾನುಭವಿಗಳಿಗೆ ಸರಕಾರ ನೀಡುತ್ತದೆ. ಹೊರ ಪಡಿತರ ಚೀಟಿ ನೀಡಲು ಸರಕಾರ ಶೀಘ್ರ ಕ್ರಮಗಳನ್ನು ಕೈಗೊಳ್ಳಲಿದೆ. ಸರಕಾರ ಬಿಪಿಎಲ್ ಪಡಿತರ ಕಾರ್ಡ್‌ನ್ನು ರದ್ದುಗೊಳಿಸಿದೆ ಎಂದು ವಿಪಕ್ಷದವರು ಅಪಪ್ರಚಾರ ಮಾಡಿದರು. ಆದರೆ ಜಿಲ್ಲೆಯಲ್ಲಿ ಕೇವಲ 806 ಕಾರ್ಡ್ ಮಾತ್ರ ರದ್ದುಗೊಂಡಿರುವುದು ಅದು ಸರಿಯಾದ ದಾಖಲೆ ನೀಡದವರದು,ದಾಖಲೆ ನೀಡಿದವರ ಕಾರ್ಡ್‌ಗಳು ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಯಾವುದೇ ಬಿಪಿಎಲ್ ಕಾರ್ಡ್ ರದ್ದುಗೊಂಡಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ನ.ಪಂ ಸದಸ್ಯ ಜಗದೀಶ್ ಡಿ, ಬ್ಲಾಕ್‌ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಜಿ.ಪಂ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ಶಾಹುಲ್ ಹಮೀದ್, ನಮೀತಾ ಪೂಜಾರಿ, ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ, ಪಿ.ಟಿ ಸೆಭಾಸ್ಟೀನ್ ಕಳೆಂಜ, ಹಕೀಂ ಕೊಕ್ಕಡ ಉಪಸ್ಥಿತರಿದ್ದರು.