ಬೆಳ್ತಂಗಡಿ: ದಾನಿಗಳ ಸಹಕಾರದೊಂದಿಗೆ ಮಾ.4 ರಂದು ಮದ್ದಡ್ಕದ ಸಮಾಜಸೇವಕ ಅಬ್ಬೋನು ಮದ್ದಡ್ಕ ಅವರ ನಿವಾಸದಲ್ಲಿ ಅರ್ಹ ಕುಟುಂಬಗಳಿಗೆ ರಂಝಾನ್ ಆಹಾರದ ಕಿಟ್ ವಿತರಣೆ, ಝಕಾತ್ ದಾನ ನಿಧಿ, ಹಾಗೂ ಅರ್ಹ ಫಲಾನುಭವಿಗಳಿಗೆ ಚಿಕಿತ್ಸೆಗೆ ಧನಸಹಾಯ ಮತ್ತು ಶೈಕ್ಷಣಿಕ ನಿಧಿ ಹಸ್ತಾಂತರ ಕಾರ್ಯಕ್ರಮ ಜರುಗಿತು.
ಇಂಡಿಯನ್ ಆಸ್ಪತ್ರೆ ಮಂಗಳೂರು ಇದರ ಚೇರ್ಮೆನ್, ಖ್ಯಾತ ಹೃದಯರೋಗ ತಜ್ಞ ಡಾ. ಯೂಸುಫ್ ಕುಂಬ್ಲೆ ಅವರ ತಾಯಿಯ ಹೆಸರಿನಲ್ಲಿರುವ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ ತಲಾ 2 ಸಾವಿರದಂತೆ 50 ಕುಟುಂಬಗಳಿಗೆ 1 ಲಕ್ಷ ರೂ ವೆಚ್ಚದಲ್ಲಿ ರಂಝಾನ್ ಆಹಾರ ಸಾಮಾಗ್ರಿಗಳ ಕಿಟ್ ಹಸ್ತಾಂತರಿಸಲಾಯಿತು.

ಇದೇ ವೇಳೆ ಜಮೀಯತುಲ್ ಫಲಾಹ್ ಉಡುಪಿ ದ.ಕ ಘಟಕದ ಪೂರ್ವ ಜಿಲ್ಲಾಧ್ಯಕ್ಷ, ಹಿರಿಯ ಸಾಮಾಜಿಕ ಮುತ್ಸದ್ದಿ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ಅವರ ವತಿಯಿಂದ 30 ಕುಟುಂಬಗಳಿಗೆ ತಲಾ 1500 ರಂತೆ ಝಕಾತ್ ದಾನ ನಿಧಿ ವಿತರಿಸಲಾಯಿತು. ಉಳಿದ ಒಂದು ಲಕ್ಷ ರೂ. ಗಳನ್ನು ಜಮೀಯತುಲ್ ಫಲಾಹ್ ಮೂಲಕ ನೀಡುವುದೆಂದು ಅವರು ಈ ವೇಳೆ ಘೋಷಿಸಿದರು.
ಹೊಟೇಲ್ ನಲ್ಲಿ ಕೂಲಿ ಕಾರ್ಮಿಕನಾಗಿದ್ದರೂ ತನ್ನ ಮೂವರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡುತ್ತಿರುವ ಕುಟುಂಬಕ್ಕೆ ಅಬ್ಬೋನು ಮದ್ದಡ್ಕ ಅವರ ಫ್ಯಾಮಿಲಿಯ ವತಿಯಿಂದ ಶೈಕ್ಷಣಿಕ ನಿಧಿ ಹಸ್ತಾಂತರ ಹಾಗೂ ಮೂರು ಮಂದಿ ತೀರಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಫಲಾನುಭವಿಗಳಿಗೆ ಚಿಕಿತ್ಸಾ ವೆಚ್ಚವನ್ನು ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ ಲೆತೀಫ್ ಸಾಹೇಬ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಒಕ್ಕೆತ್ತೂರು ಮಸ್ಜಿದ್ ಧರ್ಮಗುರು ರಫೀಕ್ ಅಹ್ಸನಿ, ಮಲ್‌ಜಅ ಪ್ರಾರ್ಥನಾ ಸಮ್ಮೇಳನ ಸ್ವಾಗತ ಸಮಿತಿ ಚೇರ್ಮೆನ್ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ, ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಶ್ರಫ್ ಚಿಲಿಂಬಿ ಇವರು ಶುಭ ಕೋರಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಎಂ.ಹೆಚ್ ಅಬೂಬಕ್ಕರ್, ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಅಧ್ಯಕ್ಷ ಎಂ.ಹೆಚ್ ಹಸನಬ್ಬ, ಹಿರಿಯರಾದ ಪುತ್ತಾಕ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಿಸಿದ ಸಮಾಜ ಸೇವಕ ಅಬ್ಬೋನು ಮದ್ದಡ್ಕ ಅವರ ಕಾರ್ಯವನ್ನು ಅತಿಥಿಗಳು ಅಭಿನಂದಿಸಿದರು.
ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.