25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಗರಗಳಲ್ಲಿ ಬಿ -ಖಾತಾ ಆಂದೋಲನ: ಜನರ ಕಣ್ಣೊರೆಸುವ ತಂತ್ರ, ಖಜಾನೆ ತುಂಬಿಸುವ ಒಳತಂತ್ರ: ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಟೀಕೆ

ಬೆಳ್ತಂಗಡಿ: ನಗರಗಳಲ್ಲಿ ಎಲ್ಲಾ ನಿವೇಶನಗಳಿಗೆ ಎ ಖಾತಾ ಹಾಗೂ ಬಿ ಖಾತಾ ಎಂದು ವರ್ಗಿಕರಿಸಿ ಸರಕಾರವು ಅಧಿಸೂಚನೆ ಹೊರಡಿಸಿ ತರಾತುರಿಯಲ್ಲಿ ಬಿ ಖಾತಾ ನೀಡಲು ಆಂದೋಲನಕ್ಕೆ ಆದೇಶ ನೀಡಿರುವುದು ಜನಗಳ ಕಣ್ಣೊರೆಸುವ ತಂತ್ರವಷ್ಟೇ ಆಗಿದೆ. ಇದರ ಒಳತಂತ್ರ ಖಾಲಿಯಾಗಿರುವ ಸರಕಾರದ ಖಜಾನೆ ತುಂಬಲು ಇನ್ನೊಂದು ಮಾರ್ಗವಷ್ಟೇ ಆಗಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಟೀಕಿಸಿದ್ದಾರೆ.


ಕಳೆದ ಹಲವಾರು ವರ್ಷಗಳಿಂದ ಜನಗಳಿಗೆ ಖಾತ ನೀಡುವ ಸಮಸ್ಯೆ ರಾಜ್ಯದಲ್ಲಿದ್ದು ಇದಕ್ಕೆ ಸೂಕ್ತ ನಿಯಮಗಳನ್ನು ರೂಪಿಸದೆ, ಈ ಕುರಿತ ಅಕ್ರಮ- ಸಕ್ರಮ ಕಾನೂನಿನ ಕುರಿತ ವ್ಯಾಜ್ಯಗಳು ಸುಪ್ರೀಂ ಕೋರ್ಟ್ ನಲ್ಲಿ ಇರುವಾಗ ನ್ಯಾಯಾಲಯದಲ್ಲಿ ಸರಿಯಾದ ವಾದಗಳನ್ನು ಮಂಡಿಸಿ ಜನಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ಬದಲಾಗಿ ಕೇವಲ ಬಿ ಖಾತ ನೀಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿ ಜನಸಾಮಾನ್ಯರನ್ನು ಮರಳುಗೊಳಿಸುವ ನೀತಿ ಸರಿಯಲ್ಲ. ಈ ಬಿ ಖಾತೆ ಯಿಂದ ಕಟ್ಟಡ ನಿರ್ಮಿಸಲು ಹಾಗೂ ಬ್ಯಾಂಕ್ ಸಾಲ ಪಡೆಯಲು ಅವಕಾಶ ಇಲ್ಲ, ಅನಧಿಕೃತ ನಿವೇಶನಗಳಿಗೆ ಬಿ ಖಾತ ನೀಡುವ ಪದ್ಧತಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಹಿಂದಿನಿಂದಲೂ ಇದೆ. ಇದು ಕೇವಲ ಆಸ್ತಿ ಮಾರಾಟಕ್ಕೆ ಮಾತ್ರ ಅನುಕೂಲವೇ ಹೊರತು ಇದು ಶಾಶ್ವತ ಪರಿಹಾರ ಅಲ್ಲ ಇಂಥ ನಿವೇಶನಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅನುಮತಿಯು ಇರುವುದಿಲ್ಲ. ವಿನ್ಯಾಸ ಅನುಮೋದನೆಗೊಳ್ಳದ ನಿವೇಶನಗಳಿಗೆ ಸಹಜವಾಗಿ ಬ್ಯಾಂಕ್ ಸಾಲಗಳು ಕೂಡ ಲಭ್ಯವಾಗುವುದಿಲ್ಲ. ಹಾಗಾಗಿ ಸರಕಾರವೇ ಈ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಿದಂತೆ ಸದ್ರಿ ಬಿ ಖಾತ ನಿವೇಶನಗಳು ಯಾವುದೇ ಕಾರಣಕ್ಕೂ ಸಕ್ರಮ ಎನಿಸಿಕೊಳ್ಳುವುದಿಲ್ಲ. ಕಳೆದ ಮೂರು ನಾಲ್ಕು ತಿಂಗಳುಗಳಿಂದ ಸರ್ಕಾರದ ಕಾವೇರಿ ತಂತ್ರಾಂಶದಲ್ಲಿ ಅನಧಿಕೃತ ನಿವೇಶನಗಳ ಮಾರಾಟಕ್ಕೆ ಅವಕಾಶ ಇಲ್ಲದಿರುವ ಕಾರಣದಿಂದ ರಾಜ್ಯದಲ್ಲಿ ಆಸ್ತಿಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹಾಗಾಗಿ ಸರ್ಕಾರದ ಆದಾಯವು ಕಡಿಮೆಯಾಗಿದೆ. ಈಗಾಗಲೇ ಸರಕಾರ ತಾನೇ ರೂಪಿಸಿದ ತಪ್ಪು ನೀತಿಗಳ ಕಾರಣದಿಂದ ಗ್ಯಾರಂಟಿ ಯೋಜನೆಗಳಿಗೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿದೆ. ಈ ಕಾರಣದಿಂದಲೇ ತುರಾತುರಿಯಲ್ಲಿ ಬಿ ಖಾತ ನೀಡುವ ಆಂದೋಲನವನ್ನು ಹಮ್ಮಿಕೊಳ್ಳುವ ಮೂಲಕ ಆಸ್ತಿಗಳ ಮಾರಾಟಕ್ಕೆ ಅವಕಾಶ ನೀಡಿ ಸ್ಟ್ಯಾಂಪ್ ಡ್ಯೂಟಿಯ ಮೂಲಕ ತನ್ನ ಖಜಾನೆಯನ್ನು ತುಂಬಿಸಿಕೊಳ್ಳುವುದಕ್ಕೆ ಸರಕಾರ ಹೊರಟಿದೆ ವಿನಹ ಇದರಿಂದ ಜನಸಾಮಾನ್ಯರಿಗೆ ಶಾಶ್ವತ ಪರಿಹಾರ ದೊರಕುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.


ಬೆಳ್ತಂಗಡಿಯಂತಹ ಪಟ್ಟಣಗಳಲ್ಲಿ ಬಹುತೇಕ ನಿವೇಶನದಾರರು ಮತ್ತು ಅಕ್ರಮ ಕಟ್ಟಡ ನಿರ್ಮಿಸಿದವರು ಸರಕಾರಕ್ಕೆ ದುಪ್ಪಟ್ಟು ತೆರಿಗೆಯನ್ನು ಪಾವತಿಸಿಕೊಂಡು ಬರುತ್ತಿದ್ದಾರೆ.

ಸರಕಾರವು ಈ ಯೋಜನೆಯಿಂದ ಬಡ ಜನರಿಗೆ ಬಹಳ ಉಪಯೋಗವಾಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದರು, ವಾಸ್ತವವಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳ ಹೊರ ವ್ಯಾಪ್ತಿಯಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ಭೂ ಮಾಲೀಕರು ಕಂದಾಯ ನಿವೇಶನಗಳನ್ನು ರಚಿಸಿಕೊಂಡಿದ್ದು ಅವುಗಳ ಮಾರಾಟಕ್ಕೆ ಮಾತ್ರ ಈ ಕಾನೂನಿನಿಂದ ಅನುಕೂಲವಾಗಲಿದೆ. ಸರಿಯಾಗಿ ಕಾನೂನನ್ನು ಅರ್ಥೈಸಿಕೊಳ್ಳದೆ ನಿವೇಶನಗಳು ಲಭ್ಯವಿದೆ ಎಂದು ಖರೀದಿದಾರರು ಪಡೆದುಕೊಂಡಲ್ಲಿ ಮುಂದಕ್ಕೆ ಕಟ್ಟಡ ಪುನರ್ ರಚನೆ ಮಾಡುವ ಸಂದರ್ಭದಲ್ಲಿ, ಬ್ಯಾಂಕ್ ಸಾಲ ಪಡೆಯುವ ಸಂದರ್ಭದಲ್ಲಿ, ಕಟ್ಟಡ ವಿಸ್ತರಣೆ ಸಂದರ್ಭದಲ್ಲಿ ಎಲ್ಲ ರೀತಿಯ ತೊಂದರೆಗಳನ್ನು ಅನುಭವಿಸಲಿದ್ದು ಕೊಟ್ಟವ ವೀರಭದ್ರ, ಇಸ್ಕೊಂಡವ ಕೋಡಂಗಿ ಎಂಬಂತಾಗಲಿದೆ ಎಂದು ಜಯಾನಂದ ಗೌಡ ಟೀಕಿಸಿದ್ದಾರೆ, ಇದರೊಂದಿಗೆ ಸಕ್ಷಮ ಪ್ರಾಧಿಕಾರ ಮೂಡಕ್ಕೆ ಸಿಂಗಲ್ ಲೇಔಟ್ ವಿನ್ಯಾಸ ನಕ್ಷೆಗೆ ಅನುಮತಿ ಕೊಟ್ಟು, ಕಟ್ಟದ ನಿರ್ಮಾಣಕ್ಕೆ ಅನುಮತಿ ಕೊಡುವಂತೆ ಮತ್ತು ಬ್ಯಾಂಕ್ ಗಳು ಸಾಲ ಕೊಡುವಂತೆ ಸರಕಾರ ನಿರ್ದೇಶನ ಕೊಟ್ಟರೆ ಜನರಿಗೆ ಉಪಯೋಗ ಆಗುತ್ತೆ ಎಂದು ತಿಳಿಸಿದರು

Related posts

ಮಲವಂತಿಗೆ ಗ್ರಾ.ಪಂ. ಮತ್ತು ಕೆನರಾ ಬ್ಯಾಂಕ್ ವತಿಯಿಂದ ಜನ ಸುರಕ್ಷಾ ಸಂಪೂರ್ಣತಾ ಅಭಿಯಾನ

Suddi Udaya

ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ

Suddi Udaya

ಮಿಜಾರುಗುತ್ತು ಆನಂದ ಆಳ್ವ ರವರ ನಿಧನಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಮಲವಂತಿಗೆ : 38ನೇ ವರ್ಷದ ಶ್ರೀವಿದ್ಯಾ ಗಣಪತಿ ಪೂಜ್ಯೋತ್ಸವದ ಪದಾಧಿಕಾರಿಗಳ ಆಯ್ಕೆ

Suddi Udaya

ಸೌತಡ್ಕ ಕ್ಷೇತ್ರಕ್ಕೆ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ದಿನಕರ್ ತೂಗುದೀಪ ದಂಪತಿ ಭೇಟಿ

Suddi Udaya

ರೇಂಜರ್ಸ್ ವಿಭಾಗದ ಜಾನಪದ ಗೀತ ಗಾಯನ ಸ್ಪರ್ಧೆ: ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya
error: Content is protected !!