ಬೆಳ್ತಂಗಡಿ: ಕನ್ನಡ ನಾಡಿನ ಕರಾವಳಿ, ಕನ್ನಡ ದೇವಿಯ ಪ್ರಭಾವಳಿ ನಿಜ ಅರ್ಥದಲ್ಲಿ ಪ್ರಭಾವಳಿ ತೊಡಿಸಬೇಕಾದ ಕೆಲಸ ಘನ ಸರಕಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸದನದಲ್ಲಿ ಒಂದಷ್ಟು ಚರ್ಚೆಗಳು ನಡೆದದ್ದು ಆಶಾದಾಯಕ ಬೆಳವಣಿಗೆ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ:
ಆಧ್ಯಾತ್ಮಿಕ, ಧಾರ್ಮಿಕ ಪ್ರವಾಸೋದ್ಯಮದ ಮಹಾದ್ವಾರವೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಸುರ್ಯ ದೇವಸ್ಥಾನ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಪೊಳಲಿ, ಉಡುಪಿ, ಕೊಲ್ಲೂರು, ಬಪ್ಪನಾಡು ಮೊದಲಾದ ದೇವಸ್ಥಾನಗಳ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿದೆ. ಸುಜ್ಜಿತ ಹೋಟೆಲ್, ಗುಣಮಟ್ಟದ ರಸ್ತೆಗಳು ಸಹಿತ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ವೃದ್ಧಿಸಬೇಕು.
ಮೇಟ್ರೋರೈಲು ಆರಂಭವಾಗಲಿ:
ಧಾರ್ಮಿಕ ಪ್ರವಾಸೋದ್ಯಮ ದಕ್ಷಿಣ ಕನ್ನಡದ ಸೋಮೇಶ್ವರದಿಂದ ಉತ್ತರ ಕನ್ನಡ ಮುರುಡೇಶ್ವರ ತನಕ ಮೆಟ್ರೋ ರೈಲು ಸಂಚಾರ ಆರಂಭಗೊಳಿಸಬೇಕು. ಚಾರಣ, ಸರ್ಫಿಂಗ್‌ನಂತಹ ಸಾಹಸ ಪ್ರವಾಸೋದ್ಯಮ ಅವಿಷ್ಕಾರಗಳನ್ನು ಸರಕಾರ ವೃದ್ಧಿಸಬೇಕು.
ಬೀಚ್ ಪ್ರವಾಸೋಧ್ಯಮ:
ತಣ್ಣೀರುಬಾವಿ, ಪಣಂಬೂರು, ಪಡುಬಿದ್ರೆ, ಮರವಂತೆ, ಸಸಿಹಿತ್ಲು ಕಾಪು, ಸೋಮೇಶ್ವರ ಸಹಿತ ಇತ್ಯಾದಿ ಕಡಲತೀರಗಳು ಜಿಲ್ಲೆಯಲ್ಲಿದ್ದರೂ ಕೂಡ, ಹೊರ ರಾಜ್ಯ, ವಿದೇಶಿಗರನ್ನು ನಿರೀಕ್ಷಿತ ಮಟ್ಟದಲ್ಲಿ ಸೆಳೆಯುತ್ತಿಲ್ಲ. ಸ್ವಚ್ಛತೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ, ಬೀಚ್‌ಗಳಲ್ಲಿ ಸಮರ್ಪಕ ನಿರ್ವಹಣೆ ಮಾಡಬೇಕು. ಗೋವಾದಂತೆ, ಜನಾಕರ್ಷಣೆಗೊಳ್ಳುತ್ತಿಲ್ಲ. ಹೀಗಾಗಿ ಸಮುದ್ರ ತೀರಗಳಲ್ಲಿ ವ್ಯವಸ್ಥೆಯಾಗಿ ಜಾತ್ರೋತ್ಸವ ವಾತವಾರಣ ಸೃಷ್ಟಿಯಾಗಬೇಕು. ಅದಕ್ಕಾಗಿ ಬೀಜ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಾಂಸ್ಕೃತಿಕ, ಸಾಹಸಿ ಚಟುವಟಿಕೆಗಳು ನಡೆಯುವಂತಿರಬೇಕು.
ವಾಣಿಜ್ಯ, ವ್ಯಾಪಾರ ಪ್ರವಾಸೋದ್ಯಮ:
ಮಂಗಳೂರು, ಉಡುಪಿ ನಗರವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಅತಿಥ್ಯ ವಹಿಸುವ ಸಕಲ ಸೌಕರ್ಯಗಳನ್ನು ಹೊಂದಿದ ಅದೆಷ್ಟೋ ಹೋಟೇಲ್‌ಗಳಿವೆ. ಹೋಟೆಲ್ ಕ್ಷೇತ್ರದಲ್ಲಿ ಜಿಲ್ಲೆಯ ಜನತೆ ಮುಂಚೂಣಿಯಲ್ಲಿದೆ. ಕರಾವಳಿಯಲ್ಲಿ ಕೃಷಿ, ಗ್ರಾಮೀಣ, ಕ್ರೀಡಾ, ಆರೋಗ್ಯ, ಪಾರಂಪರಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಕರಾವಳಿ ಭಾಗದಲ್ಲಿ ಇಂತಹ ಯೋಜನೆಗಳು ಅನುಷ್ಠಾನಗೊಳಿಸಲು ಖಾಸಗಿ ಸಂಸ್ಥೆಗಳು ಸಹಭಾಗಿತ್ವ ನೀಡಲು ಸಿದ್ಧವಿದೆ. ವ್ಯಾಪಕ ಪ್ರಮಾಣದಲ್ಲಿ ಯುವ ಜನತೆಗೆ ಹೊಸ ಉದ್ಯೋಗವಕಾಶಗಳು ದೊರಕುವ ಸಾಧ್ಯತೆಗಳಿವೆ. ಬೆಂಗಳೂರು, ಹೈದರಾಬಾದ್, ಚೆನ್ನೈ ಮಹಾನಗರಗಳಂತೆ ಮಂಗಳೂರಿಗೂ ಉತ್ತೇಜನ ಕೊಟ್ಟಲ್ಲಿ ಅನೇಕ ಯುವಕರಿಗೂ ಉದ್ಯೋಗಕ್ಕೆ ಸರಕಾರ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಶೈಕ್ಷಣಿಕ ಪ್ರವಾಸೋದ್ಯಮ:
ರಾಜ್ಯ ಮತ್ತು ಹೊರರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಉಡುಪಿ ಮತ್ತು ಮಂಗಳೂರಿಗೆ ಬರುತ್ತಿದ್ದು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅಡಿಯಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯಡಿಯಲ್ಲಿ ಶೈಕ್ಷಣಿಕ ಪ್ರವಾಸೋದ್ಯಮವನ್ನು ಕಲಿಕೆಯ ಚಟುವಟಿಕೆಯಡಿಯಲ್ಲಿ ಸೇರಿಸಿ ಅನೇಕ ಪ್ರವಾಸಿ ತಾಣಗಳನ್ನು ಅಧ್ಯಯನ ಪ್ರವಾಸ ಮಾಡುವ ನಿಟ್ಟಿನಲ್ಲಿ ಸರಕಾರ ಅವಕಾಶ ಕಲ್ಪಿಸಬೇಕು. ವಾರ್ಷಿಕವಾಗಿ ಎಂಟು ಕೋಟಿಗೂ ಅಧಿಕ ಪ್ರವಾಸಿಗರು ಕರಾವಳಿ ಭಾಗಕ್ಕೆ ಭೇಟಿ ನೀಡುವುದರಿಂದ ಸರಕಾರ ಈ ಬಗ್ಗೆ ಶೀಘ್ರವಾಗಿ ಗಮನ ಹರಿಸಿ ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿ ಜಾರಿಗೊಳಿಸಿ, ತನ್ಮೂಲಕ ಉಭಯ ಜಿಲ್ಲೆಗಳ ಅಭಿವೃದ್ಧಿ ಪ್ರವಾಸೋದ್ಯಮದ ಹೊಸಶಖೆ ಆರಂಭವಾಗಲು ಸಾಧ್ಯವಿದೆ ಎಂದು ತಿಳಿಸಿದರು.