ಬೆಳ್ತಂಗಡಿ: 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನು 16ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ ಈ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸುವ ಉದ್ದೇಶ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ನವೀಕರಣಕ್ಕೆ ಒತ್ತು ಹಾಗೂ ಕರಾವಳಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಂಗನವಾಡಿ ಸಹಾಯಕೀಯರ ಮತ್ತು ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಿಸಲಾಗಿದೆ.
2025-26ನೇ ಸಾಲಿನ ಈ ಆಯವ್ಯಯವು ಕರ್ನಾಟಕದ ಭವ್ಯ ಭವಿಷ್ಯದ ದಿಕ್ಸೂಚಿಯಾಗಿ ಹೊರಹೊಮ್ಮಿದೆ. ಜನ ಕೇಂದ್ರೀತ ಅಭಿವೃದ್ಧಿಯ ಮಾದರಿಯನ್ನು ಅಳವಡಿಸಿಕೊಂಡಿರುವ ನಮ್ಮ ಸರ್ಕಾರವು ಸಾಮಾಜಿಕ ಬಲವರ್ಧನೆಯ ಮೂಲಕ ಆರ್ಥಿಕ ಸುಸ್ಥಿರತೆಯನ್ನು ಸಾಧಿಸುವಲ್ಲಿ ಮುನ್ನುಗ್ಗುತ್ತಿದೆ.
ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಪರತೆಯನ್ನು ಪ್ರತಿಪಾದಿಸುವ ಕರ್ನಾಟಕ ಮಾದರಿಗೆ ದೇಶದಲ್ಲಷ್ಟೇ ಅಲ್ಲ, ಜಾಗತಿಕವಾಗಿಯೂ ಮನ್ನಣೆ ದೊರಕಿದೆ.
ಸರ್ವರನ್ನೂ ಹಾಗೂ ಸರ್ವ ಕ್ಷೇತ್ರಗಳನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿರುವ ಈ ಬಜೆಟ್ ಕರ್ನಾಟಕದ ಪ್ರಗತಿಗೆ ಕಾರಣವಾಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.