
ಮುಂಡಾಜೆ:ಕಳೆದ ವಾರವಷ್ಟೇ ನಿಡಿಗಲ್ ಹಳೇ ಸೇತುವೆ ಬಳಿ ಕಸ ಹಾಕಿದವರಿಂದಲೇ ಕಸ ವಿಲೇವಾರಿ ಮಾಡಿಸಿ ರೂ.2000 ದಂಡ ವಿಧಿಸಿದ ಘಟನೆ ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ನಡೆದಿದ್ದು ಅಂಥದ್ದೇ ಘಟನೆ ಮತ್ತೆ ಮರುಕಳಿಸಿದೆ.
ಮಾ.11 ರಂದು ಬೆಳಗ್ಗಿನ ಹೊತ್ತು ನಿಡಿಗಲ್ ಹೊಸ ಸೇತುವೆಯ ಬಳಿ ತ್ಯಾಜ್ಯ ಕಂಡುಬಂದಿದ್ದು ಯಾರೋ ನದಿಯನ್ನು ಗುರಿಯಾಗಿಸಿ ಎಸೆದ ತ್ಯಾಜ್ಯವು ಸೇತುವೆಯ ಮೇಲೆ ಬಿದ್ದಿರುತ್ತದೆ. ಕೂಡಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಕಸದ ಚೀಲವನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ ಕೆಲವು ದಾಖಲೆಗಳು ಸಿಕ್ಕಿದ್ದು ಅದು ಉಜಿರೆಯ ವ್ಯಕ್ತಿಗಳದ್ದೆಂದು ತಿಳಿದು ಬಂದಿದೆ.

ಕೂಡಲೇ ಅವರನ್ನು ದೂರವಾಣಿ ಮೂಲಕ ಸ್ಥಳಕ್ಕೆ ಕರೆಸಿ ಅವರಿಂದಲೇ ಕಸ ವಿಲೇವಾರಿ ಮಾಡಿಸಿ ರೂ. 1000 ದಂಡ ವಿಧಿಸಿ ಎಚ್ಚರಿಕೆ ನೀಡಿದ ಮುಂಡಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ ಅವರ ಕೆಲಸಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.