ಬೆಳ್ತಂಗಡಿ : ಉತ್ತರ ಕರ್ನಾಟಕ ಜಿಲ್ಲೆಗಳಿಂದ ಬೆಳ್ತಂಗಡಿ ತಾಲೂಕಿನ ನಾಗರಿಕರಿಗೆ ಚಿನ್ನ/ ಹಳೆಯ ಕಾಲದ ನಿಧಿ ಇದೆ ಬನ್ನಿ ಎಂಬ ಕರೆಗಳು ಹಲವು ದಿನಗಳಿಂದ ಬರುತ್ತಿದ್ದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯು ಇಂತಹ ಕರೆ ಮಾಡುವವರ ವಿರುದ್ಧವಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾ.11 ರಂದು ದೂರು ನೀಡಲಾಯಿತು.
ತಾಲೂಕಿನ ಹಲವು ವ್ಯಕ್ತಿಗಳಿಗೆ ಇಂತಹ ಕರೆಗಳು ನಿರಂತರವಾಗಿ ಬರುತ್ತಿದ್ದು, ಇದರ ಹಿಂದೆ ದೊಡ್ಡ ಮಾಫಿಯಾ ಕೆಲಸ ಮಾಡುತ್ತಿರುವ ಅನುಮಾನ ಕಾಡುತ್ತಿದೆ. ಕಳೆದ ವರ್ಷ ಬೆಳ್ತಂಗಡಿ 3 ಜನರನ್ನು ಚಿನ್ನ ನೀಡುವ ನೆಪದಲ್ಲಿ ತುಮಕೂರಿನಲ್ಲಿ ಬರ್ಬರ ಕೊಲೆ ಮಾಡಿ ಸುಟ್ಟುಹಾಕಿರುವ ಘಟನೆ ನಮ್ಮ ಕಣ್ಣ ಮುಂದೆ ಇರುವಾಗಲೇ ಈ ರೀತಿಯ ಕರೆಗಳು ಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಿ ಕೂಡಲೇ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ, ಜಾಲದ ಹಿಂದೆ ಯಾರೆಲ್ಲ ಭಾಗಿಯಾಗಿದ್ದಾರೆ ಎಲ್ಲಾ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಒಳಪಡಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಮುಖಂಡರುಗಳಾದ ರಶೀದ್ ಬೆಳ್ತಂಗಡಿ, ಸ್ವಾಲಿಹ್ ಮದ್ದಡ್ಕ, ಅಶ್ರಫ್ ಕಟ್ಟೆ, ಬಶೀರ್ ಕೊಯ್ಯೂರು ಉಪಸ್ಥಿತರಿದ್ದರು.