ಬೆಳ್ತಂಗಡಿ: ತಾಲೂಕಿನ ಜನತೆಯ ಜನಮಾನಸದಲ್ಲಿ ಅಜಾರಮಾರವಾಗಿ ಉಳಿದಿರುವ ಬದುಕು ಕಟ್ಟೋಣ ಬನ್ನಿ ತಂಡವು ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನ ಮಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ 1000 ಕ್ಕೂ ಹೆಚ್ಚು ಯುವ ಜನತೆಯಿಂದ ಏಕಕಾಲದಲ್ಲಿ ಭತ್ತದ ನಾಟಿ ಮಾಡಿದ ಕಾರ್ಯಕ್ರಮ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿರುವುದು ಸೇವಾ ಕಾರ್ಯಕ್ಕೆ ದೊರೆತ ಮತ್ತೊಂದು ಮೈಲುಗಲ್ಲು. ಆದರೆ ತಂಡ ಇದೀಗ ವಂದೇ ಮಾತರಂ, ನನ್ನ ಸೇವೆ ದೇಶಕ್ಕಾಗಿ ಎಂಬ ಧ್ಯೇಯದೊಂದಿಗೆ ನೇತ್ರಾವತಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಅಣಿಯಾಗುತ್ತಿದೆ.
ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಬೆಳ್ತಂಗಡಿ ರೋಟರಿ ಕ್ಲಬ್, ಉಜಿರೆ, ಶ್ರೀ ಧ.ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಶ್ರೀ ಧ.ಮಂ.ಸ್ಪೋಟ್ಸ್ ಕ್ಲಬ್, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಆರಕ್ಷಕ ಠಾಣಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ವಂದೇ ಮಾತರಂ, ನನ್ನ ಸೇವೆ ದೇಶಕ್ಕಾಗಿ ಎಂಬ ಧ್ಯೇಯದೊಂದಿಗೆ ನೇತ್ರಾವತಿ ಸ್ವಚ್ಛತಾ ಕಾರ್ಯಕ್ರಮ ಮಾ.16ರಂದು ಪೂರ್ವಾಹ್ನ 9.30ಕ್ಕೆ ನಡೆಯಲಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಕಾರ್ಯಕ್ರಮ ಉದ್ಘಾಟಿಸುವವರು, ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಧನಂಜಯ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಪುರ್ ಮಠ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು.
ವಿದ್ಯಾರ್ಥಿಗಳಲ್ಲಿ ಅರಿವು, ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ: ಮೋಹನ್ ಕುಮಾರ್
ವಿದ್ಯಾರ್ಥಿಗಳನ್ನು ಜೊತೆಗೂಡಿಸಿ ಸ್ವಚ್ಛತಾ ಕಾರ್ಯಕ್ರಮ ಮಾಡಲಾಗುತ್ತಿದೆ. ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಗೆ ಒಳಪಡುವ ಪೊಲೀಸ್ ಠಾಣೆಗಳ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ. ಯಾತ್ರಾರ್ಥಿಗಳು ನಮ್ಮ ನಂಬಿಕೆ ಆಧಾರದಲ್ಲಿ ನದಿಯಲ್ಲಿ ದೇವರು ಫೋಟೋ ಇನ್ನಿತರ ವಸ್ತುಗಳನ್ನು ಹಾಕುತ್ತಾರೆ. ಅಂತಹ ವಸ್ತುಗಳನ್ನು ತೆಗೆದು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ, ಸಮಾಜದಲ್ಲಿ ಜಾಗೃತಿ ಉಂಟು ಮಾಡಲು ಈ ಭಾರಿ ವಂದೇ ಮಾತರಂ ನನ್ನ ಸೇವೆ ದೇಶಕ್ಕಾಗಿ ಎಂಬ ಧ್ಯೇಯದೊಂದಿಗೆ ನೇತ್ರಾವತಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ತಿಳಿಸಿದರು.