ಬೆಳ್ತಂಗಡಿ : ಎಸ್. ಡಿ. ಎಂ. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಅಮೃತ ಮಹೋತ್ಸವ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಮೈರೋಳ್ತಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಪ್ರಗತಿಬಂಧು ಒಕ್ಕೂಟ ಮೈರೋಳ್ತಡ್ಕ ಇವುಗಳ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವು ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಮಾ. 16 ರಂದು ನಡೆಯಿತು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಕೆ. ಶಾಹುಲ್ ಹಮೀದ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಡಳಿತ ನಿರ್ದೇಶಕ ಜನಾರ್ದನ್ ಅವರು ಮಾತನಾಡಿ ಆರೋಗ್ಯದ ಮಹತ್ವವನ್ನು ವಿವರಿಸುತ್ತಾ ಲಭ್ಯವಿರುವ ವೈದ್ಯಕೀಯ ಸೇವೆಗಳ ಅವಕಾಶಗಳು ಹಾಗೂ ಬಡ ಕುಟುಂಬಗಳಿಗಾಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ. ದ.ಕ. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ , ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರಿ , ಗ್ರಾ.ಪಂ.ಅಧ್ಯಕ್ಷ ದಿನೇಶ್ ಖಂಡಿಗ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ನಿರುಂಬುಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್ ಎಂ. ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಸುಂದರ ಪೂಜಾರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಪ್ರಾಸ್ತಾವಿಕವಾಗಿ ಮಾತನಾಡಿ ಅಮೃತ ಮಹೋತ್ಸವದ ಹಿನ್ನೋಟ ಮತ್ತು ಮುನ್ನೋಟವನ್ನು ಸಭೆಯ ಮುಂದಿಟ್ಟು ಅಮೃತ ಮಹೋತ್ಸವ ಕಾರ್ಯಕ್ರಮದ ಯಶಸ್ವಿಗಾಗಿ ಪೋಷಕರ , ವಿದ್ಯಾಭಿಮಾನಿ ದಾನಿಗಳ ತನು, ಮನ, ಧನಗಳ ಸಹಕಾರ ಕೋರಿದರು.
ಈ ಸಂದರ್ಭ ಅಮೃತ ಮಹೋತ್ಸವ ಸವಿ ನೆನಪಿಗಾಗಿ ನೂತನ ‘ರಂಗಮಂದಿರ’ ನಿರ್ಮಾಣಕ್ಕಾಗಿ ಸರಕಾರದಿಂದ ಅನುದಾನ ಮಂಜೂರುಗೊಳಿಸುವ ಬೇಡಿಕೆಯ ಮನವಿಯನ್ನು ಅಮೃತ ಮಹೋತ್ಸವ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಜಿ.ಪಂ. ಮಾಜಿ ಸದಸ್ಯ ಕೆ.ಕೆ. ಶಾಹುಲ್ ಹಮೀದ್ ಅವರಿಗೆ ನೀಡಲಾಯಿತು.
ಶಿಬಿರದಲ್ಲಿ ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, ನೇತ್ರ ತಜ್ಞರು, ಚರ್ಮರೋಗ ತಜ್ಞರು, ಸ್ತ್ರೀರೋಗ ತಜ್ಞರು, ಕಿವಿ -ಮೂಗು -ಗಂಟಲು ತಜ್ಞರು, ಮಕ್ಕಳ ರೋಗ ತಜ್ಞರು, ಮೆಡಿಸಿನ್ ವಿಭಾಗ ತಜ್ಞರು ಸೇರಿದಂತೆ 30ಕ್ಕೂ ಅಧಿಕ ತಜ್ಞ ವೈದ್ಯರು, ವೈದ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ, ವೈದ್ಯಕೀಯ ಸಲಹೆ ನೀಡಿದರು.
ಶಿಕ್ಷಕ ಶ್ರೀಧರ್ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ರಾಜಶ್ರೀ ಪಿ.ವಿ. ಸ್ವಾಗತಿಸಿದರು. ಅಮೃತ ಮಹೋತ್ಸವ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು ಪೋಷಕರು, ವಿದ್ಯಾಭಿಮಾನಿಗಳು ಪಾಲ್ಗೊಂಡರು.