ಉಜಿರೆ:ಮಹಿಳೆ ಒಂದು ಜೀವಕ್ಕೆ ಜನ್ಮ ಕೊಡುವುದಲ್ಲದೆ ವೃತ್ತಿಪರಳೂ ಆಗಿ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಶ್ಳಾಘನೀಯವಾದುದು.ಮಹಿಳೆ ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದು ಅಭಿನಂದನೀಯ.ಇಂತಹ ಆಚರಣೆಗಳು ಮಹಿಳೆಯ ನಿಸ್ವಾರ್ಥ ಮನೋಭಾವನೆಗಳನ್ನು ಎಲ್ಲರೂ ಸ್ಮರಿಸುವಂತೆ ಮಾಡುತ್ತದೆ ಎಂದು ಧೀಮತಿ ಜೈನ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಶ್ರೀಮತಿ ಸೋನಿಯಾ ಯಶೋವರ್ಮ ಹೇಳಿದರು.

ಅವರು ಮಾ.19 ರಂದು ಧೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಜೈನ ಮುನಿಗಳಿಗೆ ಆಹಾರ ದಾನ ಕ್ರಮಗಳು ಹಾಗೂ ಜೈನ ಧರ್ಮೀಯರು ಪಾಲಿಸಬೇಕಾದ ಮುಖ್ಯ ನಿಯಮಗಳ ಬಗ್ಗೆ ಹಿರಿಯರಾದ ಹಾಗೂ ಜೈನ ಧರ್ಮಾಚರಣೆ ಹಾಗೂ ಮುನಿಗಳ ಸೇವೆಗೆ ಹೆಸರಾದ ಶ್ರೀಮತಿ ಪ್ರೇಮಾ ಗುಣಪಾಲ ಜೈನ್ ಇವರು ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧೀಮತಿ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಡಾ. ರಜತ ಪಿ ಶೆಟ್ಟಿ ಮಾತನಾಡಿ ಮಹಿಳೆ ಇಂದು ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯುತ್ತಿದ್ದಾಳೆ.ಕೌಟುಂಬಿಕವಾಗಿಯೂ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಸಕಾರಾತ್ಮಕ ಸಮತೋಲನವನ್ನು ಕಾಯುತ್ತ ಬರುತ್ತಿರುವುದು ಅಭಿವೃದ್ದಿಯ ಸಂಕೇತ ಎಂದರು.

ಸನ್ಮಾನ: ಈ ಸಂದರ್ಭದಲ್ಲಿ ಧೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಇತ್ತೀಚೆಗೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ, ದ. ಕ ಹಾಗೂ ಮಲೆನಾಡು ವಿಭಾಗದ ನಿರ್ದೇಶಕಿ ಆಗಿ ಆಯ್ಕೆಯಾದ ಡಾರಜತ ಪಿ.ಶೆಟ್ಟಿ ,ಇತ್ತೀಚೆಗೆ ಪಿ.ಎಚ್.ಡಿ ಪದವಿ ಪಡೆದ ಎಸ್ ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಶೋಭಾ ಜೀವಂಧರ್ ಜೈನ್ ಹಾಗೂ ಮುನಿಗಳ ಸೇವೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಶ್ರೀಮತಿ ಪ್ರೇಮಾ ಗುಣಪಾಲ ಜೈನ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು

ಸಂಘದ ಕಾರ್ಯದರ್ಶಿ ದಿವ್ಯಾ ಕುಮಾರಿ ಸ್ವಾಗತಿಸಿ, ಜಯಭಾರತಿ ಸೋಮಶೇಖರ್ ವಂದಿಸಿದರು. ರೇವತಿ ಹಾಗೂ ಕವನಶ್ರಿ ಸಾಧಕರನ್ನು ಪರಿಚಯಿಸಿ ಜ್ಯೋತಿಶ್ರೀ ಕಾರ್ಯಕ್ರಮ ನಿರೂಪಿಸಿದರು.