ಬೆಳ್ತಂಗಡಿ : ಸಮಾಜದಲ್ಲಿ ಹೆಣ್ಣಿಗೆ ಗೌರವ ನೀಡಬೇಕು ಹಾಗೂ ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂದು ಸಮಾಜಕ್ಕೆ ಎರಡು ಸಂದೇಶಗಳನ್ನು ನೀಡುವ ಕಥೆಯ ಸುತ್ತ ಹೆಣೆದಿರುವ ಹಾಗೂ ಬೆಳ್ತಂಗಡಿ ಪರಿಸರದ ಕಲಾವಿದರೇ ನಟಿಸಿರುವ “ತೀರ್ಪು” ಟೆಲಿಫಿಲ್ಮ್ ಕ್ಯಾತ್ಯಾಯನಿ ಕ್ರಿಯೇಷನ್ಸ್ ಧರ್ಮಸ್ಥಳ ಬ್ಯಾನರ್ ಅಡಿ ನಿರ್ಮಾಣವಾಗಿದ್ದು, ಪ್ರೇಕ್ಷಕರು ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಬಹುದು ಎಂದು ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟರಾದ ಉಮೇಶ್ ಪ್ರಭು ಧರ್ಮಸ್ಥಳ ಹೇಳಿದರು.

ಅವರು ಮಾ. 20 ರಂದು ಕನ್ಯಾಡಿ ಶ್ರೀ ರಾಮ ರೆಸಿಡೆನ್ಸಿ ಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, “ತೀರ್ಪು” ಟೆಲಿ ಚಿತ್ರದ ಕಥೆ ಮತ್ತು ನಿರ್ದೇಶನವನ್ನು ಮನು ಉಜಿರೆ ಮಾಡಿದ್ದಾರೆ. ಬೆಳ್ತಂಗಡಿಯ ಪ್ರಣೀತ್ ಕುಲಾಲ್ ಛಾಯಾಗ್ರಾಹಣ ಮತ್ತು ಕೃಷ್ಣ ಬೆಳ್ತಂಗಡಿ ಅವರು ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡನ್ನು ಅಭಿಷೇಕ್ ಧರ್ಮಸ್ಥಳ ಹಾಗೂ ಸೌಮ್ಯ ನಾರಾವಿ ಹಾಡಿದ್ದಾರೆ, ದೇವದಾಸ್ ಪ್ರಭು ಕನ್ಯಾಡಿ ನಿರ್ವಹಣೆ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಾಟ್ಯ ವಿದುಷಿ ಶಾಂಭವಿ ಆಚಾರ್ಯ ಉಡುಪಿ, ಚಂದನ್ ಕಾಮತ್ ಧರ್ಮಸ್ಥಳ, ಶಿವಪ್ಪ ಬಿರ್ವ ಗುರುವಾಯನಕೆರೆ , ಶಶಿ ಧರ್ಮಸ್ಥಳ, ಸುಮಂತ್ ಶೆಟ್ಟಿ ಬೆಳ್ತಂಗಡಿ, ಪ್ರೀತಮ್ ಶೆಟ್ಟಿ ಉಜಿರೆ, ದೀಕ್ಷಿತಾ ಪೂಜಾರಿ ಹಾಗೂ ಧರ್ಮಸ್ಥಳದ ಯುವಕರ ತಂಡ ಈ ಟೆಲಿ ಚಿತ್ರದಲ್ಲಿ ನಟಿಸಿದ್ದಾರೆ, ಚಿತ್ರದಲ್ಲಿ ಎರಡು ಹಾಡು ಹಾಗೂ ಎರಡು ಪೈಟ್ ಸಿನ್ ಇದೆ ಎಂದು ತಿಳಿಸಿದ್ದಾರೆ. ಖ್ಯಾತ ಕಾರ್ ರೇಸರ್ ಆಗಿರುವ ಉಮೇಶ್ ಪ್ರಭು ಧರ್ಮಸ್ಥಳ ಅವರು ಮೊದಲ ಬಾರಿ ನಾಯಕರಾಗಿ ಸಿನಿಲೋಕಕ್ಕೆ ಕಾಲಿಟ್ಟು ಪಾತ್ರಕ್ಕೆ ಜೀವ ತುಂಬಿದ್ದಾರೆ.
ಮಂಗಳೂರು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಮುಹೂರ್ತವಾದ ಈ ಚಿತ್ರ ಶೇ. 70 ಬೆಳ್ತಂಗಡಿ ತಾಲೂಕಿನಲ್ಲಿ ಮತ್ತು ಸೋಮೇಶ್ವರ ಬೀಚ್, ದೇವರ ಮನೆ, ಚಿಕ್ಕಮಗಳೂರು, ಪಾರ್ಪಿಕಲ್, ದಿಡುಪೆ ಪರಿಸರ, ನಿಡ್ಲೆ, ಮೊದಲಾದ ಕಡೆ ಚಿತ್ರೀಕರಣಗೊಂಡಿದೆ. ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ, ೪೩ ನಿಮಿಷದ ಟೆಲಿಫಿಲ್ಮ್ ಇದಾಗಿದೆ. ಮಾ. 7 ರಂದು ಲಾಯಿಲ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಮಾಡಿ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರು ಈ ಟೆಲಿಫಿಲ್ಮ್‌ನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿ ತಾಲೂಕಿನ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಉಮೇಶ್ ಪ್ರಭು ಅವರು ವಿನಂತಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಮನು ಉಜಿರೆ, ನಟರಾದ ಶಿವಪ್ಪ ಬಿರ್ವ, ಕ್ಯಾಮರಾ ಮೆನ್ ಪ್ರಣೀತ್ ಕುಲಾಲ್, ದೀಕ್ಷಿತಾ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸುಮಂತ್ ಶೆಟ್ಟಿ, ರಾಘವೇಂದ್ರ, ರಮಾನಂದ ಶೆಟ್ಟಿ, ಪ್ರೊಜೆಕ್ಟ್ ಮೆನೇಜರ್ ಜಿ. ದೇವದಾಸ್ ಪ್ರಭು, ಪ್ರೋತ್ಸಾಹಕ ಗ್ರೇಸಿಯನ್ ವೇಗಸ್ ಉಪಸ್ಥಿತರಿದ್ದರು. ಸೂರ‍್ಯಪ್ರಕಾಶ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.