ವೇಣೂರು: ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಕೊಡುವುದಾಗಿ ನಂಬಿಸಿ ನನ್ನಿಂದ ರೂ. 4.95 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಮೂಡುಕೋಡಿ ಗ್ರಾಮದ ವಿ.ಎ ಸುದೇಶ್ ಕುಮಾರ್ ಹಾಗೂ ಅವರ ಪತ್ನಿಯ ವಿರುದ್ದ ಆರೋಪ ಹೊರಿಸಿ, ಅದೇ ಗ್ರಾಮದ ನಿವಾಸಿ ರೋಯಿ ವರ್ಗೀಸ್ ಎಂಬವರು ವೇಣೂರು ಪೊಲೀಸ್ ಠಾಣೆಗೆ ಮಾ.19 ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ರೋಯಿ ವರ್ಗೀಸ್ ಅವರು ಮೂಡುಕೋಡಿ ಗ್ರಾಮದಲ್ಲಿ ಪಟ್ಟಾ ಜಮೀನು ಹೊಂದಿದ್ದು ಅದಕ್ಕೆ ತಾಗಿಕೊಂಡಿರುವ ಕುಮ್ಕಿ ಜಮೀನಿಗೆ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿ, ತಾನು ಸಹಕರಿಸುವುದಾಗಿ ಸುದೇಶ್ ಕುಮಾರ್ ತಿಳಿಸಿದ್ದಂತೆ ರೋಯಿ ವರ್ಗೀಸ್ ಅರ್ಜಿ ಸಲ್ಲಿಸಿದ್ದರು. ಸುದೇಶ್ ಕುಮಾರ್ 2023 ಮಾ. 22 ರಂದು ಸರ್ವೆ ನಂಬ್ರ: ೧೭೩/೩ ಮತ್ತು ೧೨೦/೩ ಆ೧ ರ ಸರ್ವೆ ನಡೆಸಿ ಲಂಚ ನೀಡಲು ಬೇಡಿಕೆ ಇಟ್ಟ ಮೇರೆಗೆ ರೋಯಿ ವರ್ಗೀಸ್ ಸುದೇಶ್ ಕುಮಾರ್ ಪತ್ನಿಯ ಬ್ಯಾಂಕ್ ಖಾತೆಗೆ ೨೦೨೩ ಮಾ. ೨೨ ರಂದು ರೂ. ೮೦ ಸಾವಿರ ಹಾಗೂ ತದನಂತರದ ದಿನಗಳಲ್ಲಿ ಒಟ್ಟು 5 ಸಲ ರೂ 4.55 ಲಕ್ಷ, ವರ್ಗಾವಣೆ ಮಾಡಿದ್ದು ಅಲ್ಲದೇ 2023 ಮಾ.22 ರಂದು ರೂ ೨೦ ಸಾವಿರ, ಹಾಗೂ ೨೦೨೩ ನ.೧೦ ರಂದು 5 ಸಾವಿರ ನಗದು ನೀಡಿದ್ದಲ್ಲದೇ, ೨೦೨೩ ನ. ೧೯ ರಂದು ಸುದೇಶ್ ಅವರ ಸೂಚನೆಯಂತೆ ಶರಣ್ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಗೆ ಔತಣ ಕೂಟದ ಬಗ್ಗೆ 15 ಸಾವಿರ ರೂ ವರ್ಗಾಯಿಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.
ತದನಂತರ ಸುದೇಶ್ ಕುಮಾರ್ ಅವರು ನೀವು ನೀಡಿರುವ ಅಕ್ರಮ-ಸಕ್ರಮ ಜಮೀನು ಮಂಜೂರುಗೊಳಿಸಲು ಅದು ಅರಣ್ಯ ಇಲಾಖೆಗೆ ಸೇರಿರುವ ಜಮೀನು ಆಗಿರುವುದರಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದು, ತಾನು ನೀಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಸುದೇಶ್ ಕುಮಾರ್ ತಾನು ಯಾವುದೇ ಹಣವನ್ನು ನನ್ನ ಖಾತೆಗೆ ಸ್ವೀಕರಿಸಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ಒಟ್ಟು ೪.೯೫ ಲಕ್ಷ ರೂ ಪಡೆದು ಜಮೀನು ಅಕ್ರಮ ಸಕ್ರಮದಲ್ಲಿ ಮಂಜೂರುಗೊಳಿಸುವುದಾಗಿ ತಿಳಿಸಿ ಜಮೀನು ಮಂಜೂರು ಮಾಡಿಸಿಕೊಡದೇ ಹಾಗೂ ಹಣವನ್ನು ವಾಪಾಸು ನೀಡದೇ ವಂಚಿಸಿರುವುದಾಗಿ ಅಪಾದಿಸಿ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ೧೮೬೦ (u/s ೪೧೭, ೪೨೦) ಯಂತೆ ಪ್ರಕರಣ ದಾಖಲಿಸಲಾಗಿದೆ.