ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ (ಡಿ.ಇಎಲ್.ಇಡಿ)ಸಂಸ್ಥೆಯಲ್ಲಿ ಪೋಷಕ ಮತ್ತು ಶಿಕ್ಷಕ ಸಭೆಯನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಸಹಪ್ರಾಧ್ಯಾಪಕ ಮಂಜು ಆರ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ತರಬೇತಿಯ ರೂಪುರೇಷೆಗಳನ್ನು ತಿಳಿಸಿ, ಶಿಕ್ಷಕರ ಮತ್ತು ಪೋಷಕರ ನಡುವಿನ ಸಕಾರಾತ್ಮಕ ಸಂವಹನವು ಮಗುವಿನ ಕಲಿಕೆ ಮೇಲೆ ಪರಿಣಾಮ ಬೀರುವುದರೊಂದಿಗೆ ಕಲಿಕಾ ವ್ಯವಸ್ಥೆಯಲ್ಲಿ ಮಗುವಿನ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಉತ್ತೇಜಿಸಲು ಸಹಾಯ ಮಾಡುತ್ತದೆ ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಆರ್ಥಿಕ ಸಾಮಾಜಿಕ ಬೆಂಬಲದೊಂದಿಗೆ ಮಾನಸಿಕ ಬೆಂಬಲವನ್ನು ನೀಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂದು ಹೇಳಿದರು.
ಮತ್ತೋರ್ವ ಸಹ ಪ್ರಾಧ್ಯಾಪಕ ತಿರುಮಲೇಶ್ ರಾವ್ ಮಾತನಾಡುತ್ತಾ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕಲಿಕೆಯ ಜೊತೆಗೆ ಪೋಷಕ ಶಿಕ್ಷಕರ ಸಭೆಯು ಸಹ ಅತ್ಯಗತ್ಯ ಭಾಗವಾಗಿದೆ. ಪೋಷಕರಿಗೆ ತಮ್ಮ ಮಗುವಿನ ಶೈಕ್ಷಣಿಕ ಕಲಿಕೆಯ ಒಳನೋಟಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣ ಗೊಳಿಸುತ್ತವೆ ಅಲ್ಲದೆ ಜೀವನದ ಕೌಶಲಗಳನ್ನು ಅಳವಡಿಸಿಕೊಳ್ಳಲು ಈ ಸಭೆಯು ಉತ್ತೇಜನ ನೀಡುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ವಹಿಸಿ ಪೋಷಕರ ಶಿಕ್ಷಕರ ಸಂಘವು ಪೋಷಕರು ಮತ್ತು ಶಿಕ್ಷಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಕಾಲೇಜಿನಲ್ಲಿ ಪರಸ್ಪರ ಸಹಕಾರದ ಮೂಲಕ ಮಗು ತನ್ನ ಅಧ್ಯಯನದಿಂದ ಯಶಸ್ಸನ್ನು ಕಾಣಲು ಸಾಧ್ಯ, ಮಗುವಿನ ವಿವಿಧ ಕೌಶಲ್ಯಗಳು ಮತ್ತು ಸಾಮಾಜಿಕ, ಭಾವನಾತ್ಮಕ ಅಂಶಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪೋಷಕರು ಈ ಅಂಶಗಳ ಬಗ್ಗೆ ಕಾಲೇಜಿನ ಶಿಕ್ಷಕರೊಂದಿಗೆ ಚರ್ಚಿಸಿದಾಗ ಶಿಕ್ಷಕರು ಸುಧಾರಿಸಲು ಸಾಧ್ಯ. ಪೋಷಕರು ತಮ್ಮ ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ ಅವರ ಭಾವನೆಗಳನ್ನು ವ್ಯಕ್ತಪಡಿಸಲು ಸಮಯ ಮತ್ತು ಅವಕಾಶವನ್ನು ನೀಡಬೇಕು. ಪೋಷಕರ ಶಿಕ್ಷಕರ ಸಭೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿ ತೋರಿಸಲು ಮಾತ್ರವಲ್ಲದೆ ಮೆಚ್ಚುಗೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸಹ ಪ್ರಾಧ್ಯಾಪಕಿ ವಿದ್ಯಾಶ್ರೀ ಉಪಸ್ಥಿತರಿದ್ದರು ನಂತರ ಪೋಷಕರು ಮತ್ತು ಶಿಕ್ಷಕರ ನಡುವೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಯಿತು.
ಪ್ರಶಿಕ್ಷಣಾರ್ಥಿ ಅಂಬಿಕಾ ಮತ್ತು ತಂಡದವರು ಪ್ರಾರ್ಥಿಸಿ , ಸಹ ಪ್ರಾಧ್ಯಾಪಕಿ ಅನುಷಾ ಡಿ.ಜೆ. ಸ್ವಾಗತಿಸಿ, ಪ್ರಿಯದರ್ಶಿನಿ ವಂದಿಸಿ, ಪ್ರಶಿಕ್ಷಣಾರ್ಥಿ ಅನುಷಾ ಕಾರ್ಯಕ್ರಮವನ್ನು ನಿರೂಪಿಸಿದರು.