ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಲೆಕುಡಿಯ ಸಮುದಾಯಕ್ಕೆ ಅವಿನಾಭಾವ ಸಂಬಂಧ ಇದೆ. ಕುಕ್ಕೆ ಶ್ರೀ ಕ್ಷೇತ್ರದ ಸ್ಥಾಪನೆಗೆ ಮೂಲ ಕಾರಣೀಭೂತರಾದ ಕುಕ್ಕೆ ಲಿಂಗ ದೈವಿಕ ಪುರುಷರು ಮಲೆಕುಡಿಯ ಜನಾಂಗಕ್ಕೆ ಸೇರಿದವರು. ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯಕ್ಕೆ ಸ್ಥಾನ ಒದಗಿಸುವ ಪರಂಪರೆ ಇದೆ. ಆದರೆ ಹೊಸ ವ್ಯವಸ್ಥಾಪನಾ ಸಮಿತಿಯಲ್ಲಿ ಸಮುದಾಯದ ಪ್ರತಿನಿಧಿಯವರಿಗೆ ಸ್ಥಾನ ಕಲ್ಪಿಸಲಾಗಿಲ್ಲ ಎಂದು ಮಾಹಿತಿ ಇದೆ.
ಸರ್ಕಾರ ಕೂಡಲೇ ಮರುಪರಿಶೀಲನೆ ಮಾಡಿ ಕ್ಷೇತ್ರದಲ್ಲಿ ಪಾರಂಪರಿಕ ಹಿನ್ನೆಲೆಯಿರುವ ಮೂಲನಿವಾಸಿ ಸಮುದಾಯಕ್ಕೆ ವ್ಯವಸ್ಥಾಪನಾ ಸಮಿತಿಯಲ್ಲಿ ಶಾಶ್ವತ ಪ್ರಾತಿನಿಧ್ಯ ನೀಡುವಂತೆ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಇವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.