ಬೆಂಗಳೂರು: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಾಜ್ಯ ಉಚ್ಛ ನ್ಯಾಯಾಲಯ ರದ್ದುಗೊಳಿಸಿ ಆದೇಶಿಸಿದ್ದು, ನೂತನ ಸಮಿತಿ ರಚಿಸುವಂತೆ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ಗೆ ತಿಳಿಸಿದೆ.
ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯಕ್ಕೆ ಫೆ.೧೮ರಂದು ನೂತನ ವ್ಯವಸ್ಥಾಪನ ಸಮಿತಿಗೆ ಸದಸ್ಯರನ್ನು ನೇಮಕಗೊಳಿಸಿ ನೀಡಿದ ಆದೇಶವನ್ನು ಮಾರ್ಪಡುಗೊಳಿಸಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮರು ಆದೇಶ ನೀಡಿತ್ತು. ಈ ಆದೇಶದಂತೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರಾಗಿ,ಪರಿಶಿಷ್ಟ ಜಾತಿ ಸ್ಥಾನದಿಂದ ಹರಿಶ್ಚಂದ್ರ ಉಪ್ಪರಪಲಿಕೆ ಕೊಕ್ಕಡ, ಮಹಿಳಾ ಸ್ಥಾನದಿಂದ ಸಿನಿ ತಂಡಶೇರಿ ಕೊಕ್ಕಡ ಮತ್ತು ಲೋಕೇಶ್ವರಿ ವಿನಯಚಂದ್ರ ವಳಂಬ್ರ ಕಡಿರುದ್ಯಾವರ, ಸಾಮಾನ್ಯ ಸ್ಥಾನದಿಂದ ಗಣೇಶ್ ಕಾಶಿ ಕಾಶಿಹೌಸ್ ಕೊಕ್ಕಡ, ಸುಬ್ರಹ್ಮಣ್ಯ ಶಬರಾಯ ವಿಶ್ವಂಬರ ಮನೆ ಕೊಕ್ಕಡ, ವಿಶ್ವನಾಥ ಕೆ. ಕೊಲ್ಲಾಜೆ ಕೊಕ್ಕಡ, ಪ್ರಮೋದ್ ಕುಮಾರ್ ಶೆಟ್ಟಿ ಎಂತಿಮರ್ ರೆಖ್ಯ, ಪ್ರಶಾಂತ್ ಕುಮಾರ್ ಶಾಂತಿಜೆ ಮನೆ ಕೊಕ್ರಾಡಿ ಹಾಗೂ ಪ್ರಧಾನ ಅರ್ಚಕರು ಕೊಕ್ಕಡ ವ್ಯವಸ್ಥಾಪನಾ ಸಮಿತಿಗೆ ನೇಮಕಗೊಂಡಿದ್ದರು. ಈ ಆದೇಶದನ್ವಯ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಕೆ. ಅವರು ಆವಿರೋಧವಾಗಿ ಆಯ್ಕೆಯಾಗಿದ್ದರು. ದೇವಸ್ಥಾನದ ಆಡಳಿತಾಧಿಕಾರಿಯವರು ನೂತನ ಸಮಿತಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದರು.
ಪ್ರಥಮ ಆದೇಶದಲ್ಲಿದ್ದ ಪ್ರಶಾಂತ್ ರೈ ಅರಂತಬೈಲು ಗೋಳಿತೊಟ್ಟು ಹಾಗೂ ಉದಯ ಶಂಕರ್ ಶೆಟ್ಟಿ ಅರಿಯಡ್ಕ ಮನೆ ಪುತ್ತೂರು ಇವರನ್ನು ಕೈಬಿಟ್ಟು ಇಬ್ಬರನ್ನು ಹೊಸದಾಗಿ ಸೇರ‍್ಪಡೆಗೊಳಿಸಿ ಮರು ಆದೇಶ ಮಾಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಉದಯ ಶಂಕರ್ ಶೆಟ್ಟಿಯವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದು, ಇದೀಗ ರಾಜ್ಯ ಉಚ್ಚನ್ಯಾಯಾಲಯ ನೂತನ ಸಮಿತಿಯನ್ನು ರದ್ದುಗೊಳಿ ಆದೇಶ ನೀಡಿರುವುದಾಗಿ ವರದಿಯಾಗಿದೆ.