ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯಿಂದ ಪರಮ ಪಾವನ ಪುಣ್ಯ ಕ್ಷೇತ್ರ ಧರ್ಮಸ್ಥಳದ ಮೇಲಾಗುತ್ತಿರುವ ಸುಳ್ಳು ಆರೋಪ ಮತ್ತು ಷಡ್ಯಂತ್ರದ ವಿರುದ್ದ ಧರ್ಮಸ್ಥಳ ಗ್ರಾಮಸ್ಥರ ಸಮಾವೇಶವು ಮಾ.27 ರಂದು ಧರ್ಮಸ್ಥಳದಲ್ಲಿ ನಡೆಯಿತು.


ಶ್ರೀ ಅಣ್ಣಪ್ಪ ಸ್ವಾಮಿ ಪಾದದಡಿಯಲ್ಲಿ ಧರ್ಮಸ್ಥಳದ ಗ್ರಾಮಸ್ಥರು, ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಭಕ್ತಿಯ ಪ್ರಾರ್ಥನೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಕಾಲ್ನಡಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ದುಷ್ಟರ ವಿರುದ್ದ ಅಗ್ನಿಪಥ, ಕ್ಷೇತ್ರದ ಪರ ಶಾಂತಿಪಥ ಎಂಬ ಭಾವನೆಯಿಂದ ಪಾಲ್ಗೊಂಡರು.
ಅಸತ್ಯತ ವಿರುದ್ದ ಸತ್ಯದ ಯಾತ್ರೆ ನಮ್ಮದು, ನಮ್ಮ ಖಾವಂದರು ಹಾಗೂ ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವರಿಗೆ ದೇವರು ಖಂಡಿತಾ ಉತ್ತರ ನೀಡುತ್ತಾರೆ. ದೇವರಲ್ಲಿ ಭಕ್ತಿಯ ಪ್ರಾರ್ಥನೆ ಸಲ್ಲಿಸಿದ್ದೇವೆ. ಮುಂದಿನ 15 ದಿನಗಳೊಳಗೆ ಖಂಡಿತಾ ಉತ್ತರ ಸಿಗುತ್ತದೆ ಎಂದು ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೇಶವ ಬೆಳಾಲು ಹೇಳಿದರು.

ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮಾತನಾಡಿ ಕ್ಷೇತ್ರದ ಎಲ್ಲ ವಿಚಾರಗಳು ತನಗಾಗಿ ಅಲ್ಲ, ಎಲ್ಲವೂ ಸಮಾಜದ ಮುಖದ ನಗುವಿಗಾಗಿ ಎನ್ನುವ ರೀತಿಯಲ್ಲಿ ಪೂಜ್ಯ ಖಾವಂದರು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕ್ಷೇತ್ರದ ಒಂದು ಅಡಿಗಲ್ಲನ್ನು ಅಲುಗಾಡಿಸಲು ಇವರ ಜನ್ಮದಲ್ಲಿ ಸಾಧ್ಯವಿಲ್ಲ. ರಣಹದ್ದುಗಳ ರೀತಿಯಲ್ಲಿ ಅಪಪ್ರಚಾರ ಮಾಡುವವರ ವಿರುದ್ದ ಹೋರಾಟ ಮಾಡಬೇಕಾಗಿದೆ. ಖಾವಂದರ ಜೊತೆ ನಾವಿದ್ದೇವೆ ಎಂದರು.

ಸಂದೀಪ್ ರೈ ಮಾತನಾಡಿ ಸಜ್ಜನರ ಮೌನ ತುಂಬಾ ಅಪಾಯಕಾರಿ, ನಮ್ಮ ಕ್ಷೇತ್ರಕ್ಕೆ ದಾಳಿ,ಅಪಪ್ರಚಾರ ಮಾಡುವುದೆಂದರೆ ಅದು ನಮ್ಮ ಮನೆಗೆ ದಾಳಿ ಮಾಡಿದಾಗೆ, ನಾವು ನಮ್ಮ ಮೌನ ಮುರಿಯಬೇಕು.ಇಲ್ಲಿಂದ ಶಂಖನಾದ ಊದಿದ್ದೇವೆ, ಧರ್ಮಯುದ್ದ ನಮ್ಮಿಂದಲೇ ಪ್ರಾರಂಭವಾಗಲಿ ಎಂದರು.
ವೇದಿಕೆಯಲ್ಲಿ ಹಿರಿಯರಾದ ಹರಿದಾಸ್ ಗಾಂಭೀರ ಧರ್ಮಸ್ಥಳ,ನಾರಾಯಣ ರಾವ್, ಪಂಚಾಯತ್ ಮಾಜಿ ಪ್ರಧಾನರಾದ ಸುಂದರ ಗೌಡ ಪುಡ್ಕೆತ್ತು, ಸಿಎ ಬ್ಯಾಂಕಿನ ಮಾಜಿ ಅದ್ಯಕ್ಷರಾದ ಭುಜಬಲಿ ಧರ್ಮಸ್ಥಳ, ಚಂದನ್ ಕಾಮತ್ ಧರ್ಮಸ್ಥಳ, ನಿರ್ದೇಶಕಿ ಶಾಂಭವಿ ರೈ, ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಧನಕೀರ್ತಿ ಅರಿಗ, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷೆ ವಿಮಲಾ, ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಧರ್ಮಸ್ಥಳ ಸಿಎ ಬ್ಯಾಂಕ್ ಅಧ್ಯಕ್ಷ ಪ್ರೀತಮ್ ಡಿ, ಯುವ ಉದ್ಯಮಿಗಳಾದ ಅಖೀಲೇಶ್, ಗ್ರಾಪಂ ಸದಸ್ಯರಾದ ಸುನೀತಾ, ಶರ್ಮಿಳಾ ಉಪಸ್ಥಿತರಿದ್ದರು.
ಪ್ರಥ್ವಿಶ್ ಗೌಡ ಕೆಂಬರ್ಜೆ ನಿರೂಪಿಸಿ, ಸಂದೇಶ್ ಗೌಡ ಧರ್ಮಸ್ಥಳ ಸ್ವಾಗತಿಸಿದರು. ರಾಜರಾಂ ವಂದಿಸಿದರು.