ಬೆಳ್ತಂಗಡಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಹೊಸದಾಗಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದೆ ಹಿರಿಯ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದು ಜಗಜ್ಜಾಹಿರಾಗಿರುತ್ತದೆ. ತಮ್ಮ ಸರಕಾರದ ಲೋಪಗಳನ್ನು ಮುಚ್ಚಿಹಾಕಲು ಸ್ಥಳೀಯ ಕಾಂಗ್ರೆಸಿಗರು, ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಟಿ.ಬಿ ಕ್ರಾಸ್ ನಿಂದ ನಡ ಗ್ರಾಮದ ಕುತ್ರೊಟ್ಟು ಸಂಪರ್ಕ ರಸ್ತೆಗೆ ರೂ.3.00 ಕೋಟಿ ಅನುದಾನ ಮಂಜೂರುಗೊಳಿಸಿ 28.03.2023ರಂದು ಕಾಮಗಾರಿಗೆ ಆದೇಶ ದೊರಕಿಸುವಲ್ಲಿ ಯಶಸ್ವಿಯಾಗಿದ್ದರು.

ಬಳಿಕ ಬಂದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯೊಡ್ಡಿತ್ತು. ಈಗ ವಿಳಂಬವಾಗಿ ಅನುಷ್ಟಾನಗೊಳ್ಳುತ್ತಿರುವ ಹಿಂದಿನ ಸರಕಾರದ ಕಾಮಗಾರಿಯನ್ನು ತಮ್ಮ ಸಾಧನೆಯೆಂದು ಬಿಂಬಿಸಿ ಸ್ಥಳೀಯ ಕಾಂಗ್ರೆಸಿಗರು ಅವರ ಮುಖಂಡರ ಭಾವಚಿತ್ರವನ್ನು ಹಾಕಿ ಪುಕ್ಕಟೆ ಪ್ರಚಾರಗಿಟ್ಟಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಲಾಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಎಳನೀರು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.