ಕನ್ಯಾಡಿ 2 : ” ತಾಯಿ, ತಂದೆ, ಗುರು, ಸಮಾಜ”ಕ್ಕೆ ಗೌರವ ನೀಡಿ ಬೆಳೆಯಿರಿ ಎಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2 ಶಾಲೆಯಲ್ಲಿ ನೆರವೇರಿಸಿದ ಗುರುವಂದನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್ ಅವರು 8ನೇ ತರಗತಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಿವಿಮಾತು ನೀಡಿದರು.

8ನೇ ತರಗತಿ ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ನೀಡಿದಂತಹ ಗುರುಗಳಿಗೆ ಆರತಿಯನ್ನು ಬೆಳಗುವ ಮೂಲಕ ಆಶೀರ್ವಾದವನ್ನು ಪಡೆದುಕೊಂಡರು. ವಿದ್ಯಾರ್ಥಿಗಳು ತಾವು ಶಾಲೆಯಲ್ಲಿ ಪಡೆದ ವಿದ್ಯೆ, ಮೌಲ್ಯ, ಶಿಕ್ಷಕರೊಂದಿಗಿನ ಒಡನಾಟದ ಅನುಭವ ಮನಬಿಚ್ಚಿ ತಮ್ಮ ಭಾವನೆಗಳನ್ನು ಹಂಚಿಕೊಂಡರು. 7ನೇ ತರಗತಿ ವಿದ್ಯಾರ್ಥಿಗಳು ಬೀಳ್ಕೊಡುವವರ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ತರಗತಿ ಶಿಕ್ಷಕ ನಾಗರಾಜ್ ಇವರು ಮಕ್ಕಳೊಂದಿಗೆ ಕಳೆದ ಕ್ಷಣವನ್ನು ಮೆಲುಕು ಹಾಕುವ ಮೂಲಕ ಅವರನ್ನು ಹಾರೈಸಿದರು.
ಶಾಲಾ ಗೌರವ ಸಲಹೆಗಾರರಾದ ರಾಜೇಂದ್ರ ಅಜ್ರಿ ತಮ್ಮ ಪ್ರಾಸ್ತಾವಿಕ ನುಡಿಯೊಂದಿಗೆ ಮಕ್ಕಳಿಗೆ ಆಶೀರ್ವಾದವನ್ನು ನೀಡಿದರು. ಎಂಟನೇ ತರಗತಿ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳು ಗಳಿಸಿಕೊಂಡ ಉತ್ತಮ ನಡವಳಿಕೆ, ಗುಣ, ವಿದ್ಯಾಭ್ಯಾಸದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಶಾಲೆಗೆ ತಮ್ಮ ನೆನಪಿನ ಕಾಣಿಕೆಯಾಗಿ ” ಏರ್ ಕೂಲರ್ “ಅನ್ನು ನೀಡುವ ಮೂಲಕ ತಮ್ಮ ಶಾಲೆಯ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯೆ ಮತ್ತು ಶಾಲೆಯ ಅಕ್ಷರ ದಾಸೋಹದ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀಮತಿ ಭಾರತಿ ಅವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ನವೀನ್ ಚಂದ್ರ ಶೆಟ್ಟಿ, ಅರುಣ್ ಕುಮಾರ್, ಪ್ರಭಾಕರ್ ಗೌಡ ಬೋಳ್ಮಾ, ಸುಂದರ ಗೌಡ ಪುಡ್ಕೆತ್ತು ,( ಮಾಜಿ ಮಂಡಲ ಪ್ರಧಾನರು ) ಚಾಮರಾಜ ಇಂದ್ರ., ಸೂರ್ಯಪ್ರಕಾಶ್, ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ನಂದ, ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ, ಸದಸ್ಯರು, ಹಳೆ ವಿದ್ಯಾರ್ಥಿ ಸುದರ್ಶನ್, 8ನೇ ತರಗತಿ ವಿದ್ಯಾರ್ಥಿಗಳ ಪೋಷಕರು ಶಾಲಾ ಶಿಕ್ಷಕ ವೃಂದ, ಶಾಲಾ ಮಕ್ಕಳು, ಶಾಲಾ ಅಕ್ಷರ ದಾಸೋಹ ಸಿಬ್ಬಂದಿಗಳು ಭಾಗಿಯಾದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ ಮಕ್ಕಳಿಗೆ ಶುಭ ಹಾರೈಸಿದರು. ವಂದನೆಯನ್ನು 7ನೇ ತರಗತಿ ವಿದ್ಯಾರ್ಥಿನಿ ನಿನಾದ ಮತ್ತು ನಿರೂಪಣೆಯನ್ನು ವಿದ್ಯಾರ್ಥಿನಿ ಅನನ್ಯ ನೆರವೇರಿಸಿದರು.