ಗುರುವಾಯನಕೆರೆ: ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಮಟ್ಟದ ಸಾಧನೆ ಮಾಡಿ, ದೇಶದ ಶೈಕ್ಷಣಿಕ ಭೂಪಟದಲ್ಲಿ ಅನನ್ಯ ಸ್ಥಾನಗಳಿಸಿಕೊಂಡಿರುವ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳು, ವೇಣೂರಿನ 150 ವರ್ಷಗಳಿಗೂ ಮಿಕ್ಕಿ ಇತಿಹಾಸವಿರುವ ವಿದ್ಯೋದಯ ವಿದ್ಯಾ ಸಂಸ್ಥೆಗಳ ಆಡಳಿತವನ್ನು ವಹಿಸಿಕೊಂಡಿದೆ.

ಸಾವಿರಾರು ಪ್ರತಿಭಾವಂತರನ್ನು ಸಮಾಜಕ್ಕೆ ಸಮರ್ಪಿಸಿದ ವೇಣೂರಿನ ವಿದ್ಯೋದಯ ವಿದ್ಯಾಸಂಸ್ಥೆಗಳಲ್ಲಿ ಎಲ್ ಕೆ ಜಿ, ಯು ಕೆ ಜಿ, ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಡೆಯುತ್ತಿವೆ. ಬಾಲಕ – ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳಿವೆ. 24×7 ಬಿಸಿ ನೀರಿನ ವ್ಯವಸ್ಥೆಯಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬಸ್ ಸೌಲಭ್ಯವಿದೆ.
ಒಂದು ಕಾಲದಲ್ಲಿ ಇಲ್ಲಿನ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ನಾಡಿನಲ್ಲೇ ಹೆಸರಾಗಿದ್ದವು. ತನ್ನ ತಂದೆಯವರಾದ ಬೊಳ್ಳೂರು ಗುತ್ತು ಸತೀಶ್ ಕುಮಾರ್ ಆರಿಗ ಅವರು ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆಗಳಲ್ಲಿ ಓದಿರುವುದನ್ನು ಸ್ಮರಿಸಿ ಕೊಂಡ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ, ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆಗಳು ಶ್ರೇಷ್ಠ ವಿದ್ಯಾ ಕೇಂದ್ರಗಳಾಗಿದ್ದವು. ಸ್ವತಃ ನನ್ನ ತಂದೆ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ವಿದ್ಯೋದಯ ವಿದ್ಯಾ ಸಂಸ್ಥೆಗಳಲ್ಲಿ ಓದಿದ್ದರು. ಎಕ್ಸೆಲ್ ವೇಣೂರಿನಲ್ಲಿ ಎಲ್ ಕೆ ಜಿ, ಯು ಕೆ ಜಿ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಮುನ್ನಡೆಸುವುದರ ಜೊತೆಗೆ ಗತ ವೈಭವದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯನ್ನು ಪುನರಾರಂಭಿಸಿ, ರಾಜ್ಯದ ಉನ್ನತ ಶಾಲೆಯನ್ನಾಗಿ ರೂಪಿಸಲಾಗುವುದು.
ನಾಡು – ನುಡಿ, ನೆಲ – ಜಲದ ಬಗೆಗೆ ಸದಾ ಜಾಗೃತವಾಗಿರುವ ಎಕ್ಸೆಲ್ ವಿದ್ಯಾ ಸಂಸ್ಥೆಗಳು ವಿಶ್ವ ವಿಖ್ಯಾತ ಹಸನ್ಮುಖಿ ಗೊಮ್ಮಟೇಶ್ವರ ನೆಲೆನಿಂತ ವೇಣೂರಿನಲ್ಲಿ ರಾಜ್ಯದ ಶ್ರೇಷ್ಠ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಸ್ಥಾಪಿಸಿ, ಪ್ರತಿಭಾವಂತರಿಗೆ ಉಚಿತ ಶಿಕ್ಷಣ ಕೊಡುವ ಇರಾದೆ ಹೊಂದಿದೆ ಎಂದರು.