ಮಂಗಳೂರು: ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆಂದು ಮಹಿಳೆಯೊಬ್ಬರನ್ನು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ ಒಂದು ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಎಂದು ಮಹಿಳೆ ನೀಡಿದ ದೂರಿನ ಆರೋಪದಲ್ಲಿ ಗುರುವಾಯನಕೆರೆ ನಿವಾಸಿ, ಕೂಳೂರಿನಲ್ಲಿ ಉಸ್ತಾದ್ ಆಗಿರುವ ಜಿ. ಅಬ್ದುಲ್ ಕರೀಮ್ ಎಂಬಾತನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಎ.6 ರಂದು ಬಂಧಿಸಿದ್ದಾರೆ.
2022ರಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಮಹಿಳೆ ಖಿನ್ನತೆಯ ಸಮಸ್ಯೆಯಿಂದ ಬಳಲಿ, ಆಕೆ ತನ್ನ ಸಂಬಂಧಿಯ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಅಬ್ದುಲ್ ಕರೀಮ್ ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ. ಅದನ್ನು ತೆಗೆಸಬೇಕು ಎಂದು ಹೇಳಿದನೆನ್ನಲಾಗಿದೆ. ಅನಂತರ ಮಾಟ ಮಂತ್ರ ನಿವಾರಿಸುವ ಚಿಕಿತ್ಸೆ ಕೊಡುತ್ತೇನೆ ಎಂದು ನಂಬಿಸಿ ಆ ಮಹಿಳೆಯನ್ನು ಆಗಾಗ ಬರಲು ತಿಳಿಸಿದ್ದ. ಮಹಿಳೆ ತನ್ನ ಅಕ್ಕನ ಜತೆ ಈ ವ್ಯಕ್ತಿ ಬಳಿ ಹಲವು ಬಾರಿ ಹೋಗಿದ್ದಾರೆ. ಅಲ್ಲಿ ಆತ ಕೆಲವು ಬಾರಿ ಮಹಿಳೆಗೆ ಕುರಾನ್ ಓದಿಸಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
2022ರ ಫೆ. 10 ರಂದು ಸಂತ್ರಸ್ತೆಯ ಅಕ್ಕನಿಗೆ ಕೆಲಸ ಇದ್ದ ಕಾರಣ ಸಂತ್ರಸ್ತೆ ಒಬ್ಬಳೇ ಹೆಜಮಾಡಿ ಮನೆಗೆ ಹೋಗಿದ್ದು, ಅಲ್ಲಿ ಉಸ್ತಾದ್ ಆಕೆಯಲ್ಲಿ ಕುರಾನ್ ಓದಿಸಿ ಆಕೆಯ ಮೈಮುಟ್ಟಿ ಕಿರುಕುಳ ನೀಡಿದ್ದ ಎಂದು ಅಪಾದಿಸಲಾಗಿದೆ. ಅಲ್ಲದೆ ಮಹಿಳೆಯಿಂದ 55 ಸಾವಿರ ರೂ. ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಒಟ್ಟು ಸುಮಾರು ಒಂದು ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.